23/1/12

ಕಾಲಾಯ ತಸ್ಮೈನಮಃ

ಅದ್ಯಾವ ದೇವರು ಮನುಷ್ಯನಿಗೆ ಮರೆವನ್ನು ನೀಡಿದನೋ ಗೊತ್ತಿಲ್ಲ,ಆದರೂ ಆತನಿಗೊಂದು ಥ್ಯಾಂಕ್ಸ್..ಅದೆಂತಹ ಅಹಿತಕರ ನೆನಪೇ ಇರಲಿ,ದುಖಃವೇ ಇರಲಿ ಕಾಲಾಂತರದಲ್ಲಿ ಮರೆತುಹೋಗುತ್ತದೆ.ಮುಂದೆಂದೋ ಆ ನೆನಪು ಮರುಕಳಿಸಿದಾಗ ತುಸು ನೋವು,ಬೇಜಾರು ಆಗುತ್ತದೆ.ತೀರ ನೋವಿನ ಘಟನೆಯಾದರೆ ಹೆಚ್ಚಿನ ಸಂಕಟವಾಗುತ್ತದೆ.ಆದರೆ ನಮಗೆ ಆ ಘಟನೆ ನಡೆದ ದಿನ ಉಂಟಾಗಿದ್ದ  ದುಃಖ ಇರುವುದಿಲ್ಲ.ಕಾರಣ ನಮ್ಮ ಮನಸ್ಸು ಪಕ್ವವಾಗಿರುತ್ತದೆ.ನಿಧಾನವಾಗಿ ನಾವು ಆ ಘಟನೆಗಳನ್ನು ಮರೆಯುತ್ತಿರುತ್ತೇವೆ.ಕೆಲವೊಮ್ಮೆ ಅಂತಹ ಘಟನೆಗಳನ್ನು ನೆನೆದಾಗ ನಗುವೂ ಬರಬಹುದು!ಬಾಲ್ಯದಲ್ಲಿ ತರಕಾರಿ ತರಲು ಕೊಟ್ಟ ಹತ್ತು ರುಪಾಯಿ ಕಳೆದುಕೊಂಡಾಗ ಮನೆಗೆ ಹೋಗದೇ ಅದೆಲ್ಲೋ ಕುಳಿತು ಅತ್ತಿದ್ದ ಘಟನೆ ಒಮ್ಮೆ ನೆನೆಸಿಕೊಳ್ಳಿ.ಖಂಡಿತ ನಗು ಬರುತ್ತದೆ ಅಲ್ಲವೇ?.ಒಮ್ಮೆ ದುಃಖ ತಂದಿದ್ದ ಘಟನೆ ಮುಂದೆಂದೋ ನಗು ತರಿಸುತ್ತದೆ.ಆದರೆ ಕೆಲವೊಂದು ಘಟನೆಗಳು ಯಾವಾಗಲೂ ದುಃಖವನ್ನೇ ತರುತ್ತವೆ.ಪ್ರೀತಿಪಾತ್ರರ ಅಗಲಿಕೆ,ಅವಮಾನ ಇಂತಹವು ನೆನೆಸಿಕೊಂಡಾಗಲೆಲ್ಲ ದುಃಖವಾಗದಿರದು.ಆದರೂ ಮುಂಚಿನ ತೀವ್ರತೆ ಇರುವುದಿಲ್ಲ. ತುಂಬಾ ಮಳೆಬಂದಾಗ ಹೊರಗೆ ನೋಡಿ,ನೆಲವೆಲ್ಲಾ ಮಳೆ ನೀರಲ್ಲಿ ತೋಯ್ದು ಹೋಗಿರುತ್ತದೆ.ಅದೇ  ಒಂದು ವಾರದ ನಂತರ ನೋಡಿ,ನೆಲ ಮೇಲುನೋಟಕ್ಕೆ ಒಣಗಿದಂತೆ ಕಂಡುಬಂದರೂ ತೇವಾಂಶ ಇದ್ದೇಇರುತ್ತದೆ.ತಿಂಗಳ ನಂತರ ಅದೂ ಇರುವುದಿಲ್ಲ.ನೋವುಗಳು ಕೂಡ ಹಾಗೆಯೇ ಅವು ಬಂದ ದಿನ ಕಣ್ಣೀರಿನ ಕಾಲುವೆಯನ್ನೇ ಹರಿಸಿಬಿಡುತ್ತದೆ.ಕಾಲಾಂತರದಲ್ಲಿ ಮರೆತೇಹೋಗುತ್ತದೆ. ದುಃಖವನ್ನು ಅನುಭವಿಸುತ್ತಲೇ ಮುಂದಿನ ಜೀವನಕ್ಕೆ ಅಣಿಯಾಗಬೇಕು.ಅದಕ್ಕೇ ಹೇಳುವುದು ಜೀವನೋತ್ಸಾಹ ಎಂದು.ಅದು ಇದ್ದವರಿಗೆ ಎಂತಹ ನೋವು ಸಹ ಹೆಚ್ಚುದಿನ ಪೀಡಿಸುವುದಿಲ್ಲ.ಆದರೆ ಕೆಲವು ದುರ್ಬಲ ಮನಸ್ಸಿನ ಜನರಿಗೆ ಇದು ಸಾಧ್ಯವಾಗುವುದಿಲ್ಲ.ಅಂತಹ ಮನಸ್ಸಿನವರು ಆತ್ಮಹತ್ಯೆಯಂತಹ ಅತಿರೇಕಕ್ಕೆ ಹೋಗುತ್ತಾರೆ.ಅಂತಹ ಸನ್ನಿವೇಶ ಬಂದಾಗ ತಮ್ಮ ಆತ್ಮಹತ್ಯೆಯ ನಿರ್ಧಾರವನ್ನು ಸ್ವಲ್ಪಕಾಲ ಮುಂದೂಡಿದರೂ ಸಾಕು.ಮತ್ತೆಂದೂ ಮನಸ್ಸಿನಲ್ಲಿ ಅಂತಹ ವಿಚಾರ ಸುಳಿಯುವುದಿಲ್ಲ. ನಿಜ! ಸಮಸ್ಯೆಗಳು,ನೋವುಗಳು ಬಂದ ದಿನ ನಮಗೆ ಯಾವುದೇ ಪರಿಹಾರಗಳು ತೋಚುವುದಿಲ್ಲ.ಆದರೆ ಉತ್ತರ ಇಲ್ಲದ ಪ್ರಶ್ನೆಗಳು ಖಂಡಿತ ಇರುವುದಿಲ್ಲ.ಉತ್ತರ ಹುಡುಕಲು ನಮ್ಮಲ್ಲಿ ತಾಳ್ಮೆಇರಬೇಕಷ್ಟೇ.ಜೀವನ ನಮ್ಮನ್ನು ಹೆಚ್ಚುಕಾಲ ಕೊರಗುತ್ತಾ ಕೂರಲು ಬಿಡುವುದಿಲ್ಲ.ನಮ್ಮನ್ನು ಮರಳಿ ನಮ್ಮ ಕೆಲಸಗಳಿಗೆ ಹಚ್ಚುತ್ತದೆ.ಯೋಚಿಸಿನೋಡಿ ಬಾಲ್ಯದಲ್ಲಿ ಹತ್ತು ರುಪಾಯಿ ಕಳೆದುಕೊಂಡಾಗ ಆತ್ಮಹತ್ಯೆಮಾಡಿಕೊಂಡಿದ್ದರೆ,ಆ ಘಟನೆಯನ್ನು ಈಗ ನೆನೆಸಿಕೊಂಡು ನಗಲು ನೀವೆಲ್ಲಿ ಇರುತ್ತಿದ್ದಿರಿ?ಅಲ್ಲವೇ?.ಹತ್ತು ರುಪಾಯಿ ನಿಮಗೆ ಈಗ ಚಿಕ್ಕದು,ಆದರೆ ಅಂದು ಅದಕ್ಕಾಗಿಯೇ ನೀವು ಅತ್ತಿದ್ದಿರಿ.ಅಂತೆಹೇ ಇಂದು ದೊಡ್ಡದಾಗಿ ಕಾಣುವ ಸಮಸ್ಯೆ ಮುಂದೆ ತುಂಬಾ ಸಣ್ಣದಾಗಿ ಕಾಣುತ್ತದೆ.ಇಂದು ಅಳಿಸಿದ ಘಟನೆ ಮುಂದೆ ನಗಿಸಲೂಬಹುದು.  ಅದಕ್ಕಾಗಿಯೇ ಅಂಗ್ಲ ಕವಿಯೊಬ್ಬ ಹೀಗೆ ಹೇಳಿರುವುದು "Expect love;every feeling is subjected to time" ಎಂದು.ಜೀವನ ಆಕಸ್ಮಿಕಗಳ ಆಗರ.ತಮಾಷೆಯಾಗಿ ಹೇಳುವುದಾದರೆ "ರಾತ್ರಿ ಉದ್ದಿನ ಹಿಟ್ಟು ನೆನೆಸಿರುತ್ತೀರಿ.ಬೆಳಗ್ಗೆ ಎದ್ದರೆ ಇಡ್ಲಿ,ಇಲ್ಲದಿದ್ದರೆ ಅದೇ ಹಿಟ್ಟಿನಲ್ಲಿ ವಡೆ".ಇಂತಹ ಆಕಸ್ಮಿಕಗಳಿಗೆ ಒಗ್ಗಿಕೊಂಡೇ ನಾವು ಜೀವನ ಸಾಗಿಸಬೇಕು.ದಾಸರು ಹೇಳಿದಂತೆ "ಈಸ ಬೇಕು ಇದ್ದು ಜೈಸಬೇಕು".ಎಷ್ಟೇ ಆದರು "ಕಾಲಾಯ ತಸ್ಮೈನಮಃ" ಅಲ್ಲವೇ?
                                     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ