24/3/12

ಸತ್ತರೆ ಸಾಯಬೇಕು ಇವರ ಹಾಗೆ...

 ಪೂರ್ಣ ಸ್ವರಾಜ್ಯದ ಕನಸಿನೊಂದಿಗೆ ಹೋರಾಟ ಆರಂಭಿಸಿ, ಅದೇ ಕನಸಿನ ನಿರೀಕ್ಷೆಯಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು ಗಲ್ಲಿಗೆ ಏರಿ ಇಂದಿಗೆ ೮೧ ವರುಷಗಳು ತುಂಬಿದೆ. ಸಾಮಾನ್ಯರು ಸಾವಿನೊಂದಿಗೆ ಜೀವನವನ್ನು ಅಂತ್ಯಗೊಳಿಸುತ್ತಾರೆ, ಆದರೆ ವೀರರಿಗೆ ಸಾವು ಮರುಹುಟ್ಟು. ಹಾಗಾಗಿಯೇ ಇಂದಿಗೂ ಭಗತ್ ಸಿಂಗ್, ಸುಖದೇವ್, ರಾಜಗುರು ನಮ್ಮ ನೆನಪಿನಲ್ಲಿ ಜೀವಂತವಾಗಿರುವುದು. ಇಂಕ್ವಿಲಾಬ್  ಜಿಂದಾಬಾದ್  ಎಂಬ ಘೋಷಣೆಯೊಂದಿಗೆ ಪ್ರಾಣಬಿಟ್ಟಾಗ ಇವರುಗಳಿಗೆ ಸುಮಾರು ೨೪ ವರ್ಷ. ದೇಶದ ಸ್ವತಂತ್ರದ ವಿಚಾರದಲ್ಲಿ ಬ್ರಿಟೀಷರ ಮುಂದೆ ಕುಳಿತು ಅಂದಿನ ತಲೆ ನೆರೆತ ನಾಯಕರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದ  ಕಾಲದಲ್ಲಿ, ದೇಶದ ವಿಚಾರದಲ್ಲಿ ಯಾವ ರಾಜಿಗೂ ಒಪ್ಪದ ಯುವ ಸಮುದಾಯ ಪ್ರತ್ಯೇಕ ಹೋರಾಟ ಪ್ರಾರಂಭಿಸಿತ್ತು. ಈ ಹೋರಾಟಗಳನ್ನು ಉಗ್ರವಾದ ಎಂದು ಕೆಲವರು ಹೀಗಳೆಯುತ್ತಿದ್ದರು. ಆಗ ಇಡೀ ದೇಶಕ್ಕೆ ತಮ್ಮ ಹೋರಾಟದ ಉದ್ದೇಶಗಳ ಅರಿವು ಮೂಡಿಸಲು ಪ್ರಾಣವನ್ನೇ ಮುಡಿಪಾಗಿರಿಸಿ ಗೆದ್ದವರು ಇವರುಗಳು .ಭಗತ್ ಸಿಂಗ್ ಅಂದು ಪೂರ್ಣ ಸ್ವರಾಜ್ಯದ ವಿಚಾರವನ್ನು ಪ್ರತಿಪಾದಿಸದೇ ಇದ್ದಿದ್ದರೇ, ನಮ್ಮ ದೇಶ ಇನ್ನೇಷ್ಟು ಭಾಗಗಳಾಗಿ ಹಂಚಿ ಹೋಗಿರುತ್ತಿತ್ತೋ? ಅವರ ಇಂತಹ ವಿಚಾರಗಳಿಗೆ ಮಾರುಹೋಗಿ ಎಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಯುವಕರು ಅತ್ತ ಕಡೆ ವಾಲುತ್ತಾರೋ ಎಂದು ಹೆದರಿ ತರಾತುರಿಯಲ್ಲಿ, ಲಾಹೋರ್ ಅಧಿವೇಶನವನ್ನು ಕರೆದು ಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಇಡಲಾಯಿತು. ಒಂದು ಕಡೆ ಈ ಯುವ ಹೋರಾಟಗಾರರನ್ನು ಹೀಗಳೆಯುತ್ತ, ಮತ್ತೊಂದು ಕಡೆಯಿಂದ ಇವರದೇ ಆದರ್ಶಗಳನ್ನು ಹೈಜಾಕ್  ಮಾಡಿತ್ತು ಕಾಂಗ್ರೆಸ್.
ಭಗತ್ ಸಿಂಗ್ , ಸುಖದೇವ್,ರಾಜಗುರು ಬದುಕಿದ್ದದ್ದು ಕೆಲವೇ ವರ್ಷಗಳು ಮಾತ್ರ. ಆದರೂ ತಮ್ಮ ನಾಲ್ಕನೇ ತಲೆಮಾರಿಗೂ ಆದರ್ಶ ಪ್ರಾಯರಾಗಿದ್ದಾರೆ. ಎಂದೋ ಬರುವ ಸಾವಿಗೆ, ಇಂದೇ ಹೆದರಿಕೊಂಡು ಕೂರುವ ಜನರ ನಡುವೆ ಸಾವನ್ನೇ ಅಪ್ಪಿಕೊಂಡ ಸಾಹಸಿಗಳು ತುಂಬಾ ವಿಭಿನ್ನ. ದೇಶಕ್ಕಾಗಿ ನಗುನಗುತ್ತ ಪ್ರಾಣಬಿಟ್ಟ ಭಗತ್ ಸಿಂಗ್, ಸುಖದೇವ್, ರಾಜಗುರು, ನಿಮಗಿದೋ ಕೋಟಿ ಸಲಾಂ.... 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ