20/3/15

ಶಹೀದ್ ೨೦೧೫!

ಅದು ೧೭ ಡಿಸೆಂಬರ್ ೧೯೨೮ರ ಸಂಜೆ, ಲಾಹೋರ್ ಪೋಲಿಸ್ ಮುಖ್ಯ ಕಚೇರಿಯ ಮುಂದೆ ಮೂರು ಯುವಕರು, ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲಿಸ್, ಜಾನ್.ಪಿ.ಸೌನ್ದೆರ್ಸ್ ನನ್ನು ನಡುಬೀದಿಯಲ್ಲಿ ಕೊಂದು ಪರಾರಿಯಾಗುತ್ತಾರೆ. ಕಾರಣ, ಸೈಮನ್ ಕಮಿಷನ್ನಲ್ಲಿ ಭಾರತೀಯರಿಗೆ ಅವಕಾಶ ನೀಡದೇ, ದರ್ಪ ಪ್ರದರ್ಶಿಸಿದ ಬ್ರಿಟೀಷರ ವಿರುದ್ಧ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ, "ಸೈಮನ್ ಗೋ ಬ್ಯಾಕ್" ಎಂಬ ಕೂಗಿನೊಂದಿಗೆ ಭಾಗವಹಿಸಿದ "ಪಂಜಾಬ್ ನ ಸಿಂಹ" ಲಾಲಾ ಲಜಪತರಾಯ್ ಅವರನ್ನು ಅಮಾನವೀಯವಾಗಿ ಕೊಂದುಹಾಕಲಾಗುತ್ತದೆ. ಈ ಘಟನೆ ಆ ಮೂರು ಜನ ಯುವಕರ ರಕ್ತವನ್ನು ಅದೆಷ್ಟರ ಮಟ್ಟಿಗೆ ಕುದಿಯುವಂತೆ ಮಾಡುತ್ತದೆಂದರೆ,ಒಂದೇ ತಿಂಗಳಲ್ಲಿ ಲಜಪತರಾಯರ ಕೊಲೆಯ ಸೇಡು ತೀರಿಸಿಕೊಂಡುಬಿಡುತ್ತಾರೆ. ಆ ಮೂವರು ಯುವಕರು "ಭಗತ್ ಸಿಂಗ್", "ಸುಖದೇವ್" ಹಾಗು "ರಾಜಗುರು". ಈ ಕೆಲಸದ ನೇತೃತ್ವ ವಹಿಸಿದ್ದು "ಚಂದ್ರಶೇಖರ್ ಆಜಾದ್".

೧೩ ಮಾರ್ಚ್ ೧೯೪೦: "ಭಗತ್ ಸಿಂಗ್", "ಸುಖದೇವ್" ಹಾಗು "ರಾಜಗುರು" ಅವರನ್ನು ಗಲ್ಲಿಗೇರಿಸಿದ್ದರ ಹಾಗು ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಪ್ರತೀಕಾರವನ್ನು ಭಾರತೀಯ ಯುವಕ ಉಧಮ್ ಸಿಂಗ್ ಲಂಡನ್ನ caxton ಹಾಲ್ ನಲ್ಲಿ ಮೈಕಲ್ ಓ-ಡಯರ್ನನ್ನ ಗುಂಡಿಕ್ಕಿ ಕೊಳ್ಳುವ ಮೂಲಕ ತೀರಿಸಿಕೊಳ್ಳುತ್ತಾನೆ.

ಈ ಎರಡು ಉದಾಹರಣೆಗಳ ಉದ್ದೇಶ ಏನೆಂದರೆ, ಭಾರತದ ಯುವಕರನ್ನು ಮನಸೋ ಇಚ್ಛೆ ಪರಿಭಾವಿಸಿರುವ ರಾಜಕಾರಣಿಗಳಿಗೆ ಇತಿಹಾಸದ ಪರಿಚಯ ಮಾಡಿಕೊಡುವುದು. ಅಷ್ಟೇ... ನಾವೇನು ಮಾಡಿದರೂ ಸರಿ, ನಮ್ಮನ್ನು ಕೇಳುವವರಿಲ್ಲ, ಸಿಕ್ಕ ಸಿಕ್ಕವರನ್ನು ಕೊಂದು, ದೇಶವನ್ನ ಕೊಳ್ಳೆಹೊಡೆಯುವುದು ನಮ್ಮ ಪಿತ್ರಾರ್ಜಿತ ಅಧಿಕಾರ ಎಂಬ ಅಹಂ ನಮ್ಮ ರಾಜಕಾರಣಿಗಳಲ್ಲಿ ಬೆಳೆದುಬಿಟ್ಟಿದೆ.ಅಂತಹ ಅಹಂಕಾರದ ಅಂತ್ಯ ಹೇಗಿರುತ್ತದೆ ಎಂಬುದರ ಪರಿಚಯ ಬಹುಷಃ ನಮ್ಮ ರಾಜಕಾರಣಿಗಳಿಗೆ ಮರೆತುಹೋಗಿರಬಹುದೇನೋ?
ತಮ್ಮ ಕಳ್ಳದಾರಿಗೆ ಅಡ್ಡಬಂದವರನ್ನು ಏನು ಮಾಡಲು ಸಹ ಹೇಸದ ರಾಕ್ಷಸ ಪ್ರವೃತ್ತಿಯವರು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು.ಇಂತಹ ಭ್ರಷ್ಟ ಅಧಿಕಾರಿಗಳ ವರ್ಗ ಹಾಗು ಭ್ರಷ್ಟ ರಾಜಕಾರಣಿಗಳ ಸಂಗಮ ನಮ್ಮನ್ನಾಳುವ ವ್ಯವಸ್ಥೆ !ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿಯೂ ಸಹ, ಜನರ ಸೇವೆಗೆ ಟೊಂಕ ಕಟ್ಟಿ ನಿಲ್ಲುತ್ತಾರಲ್ಲ, ಅಶೋಕ್ ಕೇಮ್ಖ, ರಶ್ಮಿ ಮಹೇಶ್, ಎಸ್.ಪಿ. ಮಧುಕರ್ ಶೆಟ್ಟಿ ಅವರಂತಹ ಅಧಿಕಾರಿಗಳು, ಅವರಿಗೆ ಸಿಕ್ಕಿದ್ದು ವರ್ಗಾವಣೆ, ಚಪ್ಪಲಿ ಸೇವೆ, ಹತಾಶೆ ಹಾಗು ನೋವು-ಸಂಕಟಗಳು ಮಾತ್ರ. ಈ ವ್ಯವಸ್ಥೆಗೆ ಸಿಕ್ಕ ಮತ್ತೊಂದು ಬಲಿ, ಡಿ.ಕೆ.ರವಿ.
ಬದುಕಿದ್ದಷ್ಟು ದಿನ, ಭ್ರಷ್ಟ ರಾಜಕಾರಣಿಗಳಿಗೆ, ತೆರಿಗೆ ಕಳ್ಳರಿಗೆ ಸಿಂಹ ಸ್ವಪ್ನರಾಗಿದ್ದ ರವಿ, ಇದ್ದಕಿದ್ದಹಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ! ಒಂದು ಸಣ್ಣ ಅನುಮಾನವನ್ನು ವ್ಯಕ್ತ ಪಡಿಸದೇ ಧಾವಂತಕ್ಕೆ ಬಿದ್ದವರಂತೆ, ಪೋಲಿಸ್ ಆಯುಕ್ತ,ಗೃಹ ಸಚಿವ ಹಾಗು ಮಾನ್ಯ ಮುಖ್ಯಮಂತ್ರಿಗಳು , ರವಿಯವರ ಸಾವನ್ನು ಆತ್ಮಹತ್ಯೆ ಎಂದು ಕರೆದುಬಿಡುತ್ತಾರೆ. ಜನರ ಸಮಸ್ಯೆಗಳನ್ನು ಬಗೆಹರಿಸುತ್ತ, ಭ್ರಷ್ಟರ ಮಟ್ಟಹಾಕುತ್ತ, ಸಿಂಹದಂತೆ ಇದ್ದ ರವಿಯವರನ್ನು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಎಂದು ಬಿಂಬಿಸುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತದೆ. ಎಷ್ಟೊಂದು ವಿಚಿತ್ರ ಅಲ್ಲವೇ?

ಯಾವ ಸರ್ಕಾರಕ್ಕೆ ರವಿಯವರು ೧೨೯ ಕೋಟಿ ತೆರಿಗೆಯನ್ನು ವಸೂಲಿ ಮಾಡಿಕೊಟ್ಟರೋ, ಅಂತಹ ರವಿಯವರು ನಿಧನರಾದಾಗ, ಅವರ ತಂದೆ-ತಾಯಿಗಳಿಗೆ ಸಂತ್ವಾನ ಹೇಳುವ ಕನಿಷ್ಠ ಸೌಜನ್ಯ ಕೂಡ ಇಲ್ಲವಾಯಿತಲ್ಲ ನಮ್ಮ ಸರ್ಕಾರಕ್ಕೆ? ಛೆ!!.. ಇಡೀ ರಾಜ್ಯದ ಜನ ಸಿಬಿಐ ತನಿಖೆಗೆ ಅಗ್ರಹಿಸುತ್ತಿರುವಾಗ, ಒಲ್ಲೆ ಎಂದು ದರ್ಪ ತೋರುವ ಸರ್ಕಾರದ ಧೋರಣೆ ನೋಡಿದರೆ, ಮುಖ್ಯಮಂತ್ರಿಗಳು ಜನರ ಆಜ್ಞೆಯ ಪಾಲಕರೋ, ಅಥವಾ ಜನರೇ ಮುಖ್ಯಮಂತ್ರಿಗಳ ಆಜ್ಞೆಯ ಪಾಲಕರೋ ಎಂಬ ಅನುಮಾನ ಬರುತ್ತದೆ. ರವಿಯವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅದು ಮುಖ್ಯವಲ್ಲ. ಅವರ ಕೊಲೆ ಅಥವಾ ಆತ್ಮಹತ್ಯೆಯ ಹಿಂದೆ ಅವಿತಿರುವ ಗೋಮುಖ ವ್ಯಾಘ್ರಗಳ ಮುಖವಾಡ ಕಳಚಿ ಬಿಸಾಡುವುದು ಮುಖ್ಯ.ಆ ಕೆಲಸ, ಇಂತಹ ಸರ್ಕಾರದ ಅಂಗ ಸಂಸ್ಥೆ ಸಿ.ಐ.ಡಿ ಯ ಕೈಯಲ್ಲಿ ಸಾಧ್ಯ ಎಂದರೆ, ಸಣ್ಣ ಮಕ್ಕಳು ಸಹ ಕಲ್ಲಲ್ಲಿ ಹೊಡೆಯುತ್ತಾರೆ!
ಸರಕಾರದ ಈ ನಡವಳಿಕೆಯನ್ನು ಗಮನಿಸಿದರೆ, ಒಂದಷ್ಟು ಸ್ಪಷ್ಟವಾಗುತ್ತದೆ. ಈ ಪ್ರಕರಣದಲ್ಲಿ ಯಾರದೋ ತಲೆಯನ್ನು ಕಾಪಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಸಿಬಿಐ ತನಿಖೆಯನ್ನು ವಿರೋಧಿಸುವುದಕ್ಕೆ,ಇದಲ್ಲದೇ ಇನ್ನೊಂದು ಚಿಕ್ಕ ಕಾರಣವು ಸಹ ಇಲ್ಲ. ಸಿಬಿಐ ತನಿಖೆ ಬೇಕೆಂದು ಅರಚಾಟ ಮಾಡುತ್ತಿರುವ ಬಿಜೆಪಿ ಸಹ, ಸೌಜನ್ಯ ಪ್ರಕರಣದಲ್ಲಿ ಮಾಡಿಸಿದ್ದು ಸಹ ಸಿ.ಐ.ಡಿ ತನಿಖೆಯನ್ನೇ! ನಂದಿತಾ ಪ್ರಕರಣದಲ್ಲಿ ಕೂಡ ತನಿಖೆನಡೆಸುವ ಮೊದಲೇ ನಿಸ್ಸಂಶಯವಾಗಿ ಆತ್ಮಹತ್ಯೆ ಎಂಬ ಉದ್ಗಾರ ತನಿಖಾಧಿಕಾರಿಯಿಂದ ಹೊರಟಿತ್ತು. ಹಾಲಪ್ಪನವರ ಅತ್ಯಾಚಾರದ ಸಿ.ಐ.ಡಿ ತನಿಖೆ ಯಾವ ಹಳ್ಳ ಹಿಡಿದಿದೆ ಎಂದು ಹುಡುಕಲು ಇನ್ನೊಂದು ತನಿಖೆನಡೆಸಬೇಕಾಗಿದೆ. ಇಷ್ಟೇಲ್ಲಾ ಗೊತ್ತಿದ್ದೂ, ಸರ್ಕಾರದ ಸಿ.ಐ.ಡಿ ತನಿಖೆಯ ಮೇಲೆ ವಿಶ್ವಾಸವಿಡಲು, ಜನರೇನು ಮೂರ್ಖರೇ?
ಒಂದಂತು ನಿಜ, ರವಿಯವರ ಸಾವು ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದೆ. ಒಬ್ಬ ನಿಷ್ಟಾವಂತ, ಜನಾನುರಾಗಿ, ದಕ್ಷ ಅಧಿಕಾರಿಯ ಅಂತ್ಯ ಇಷ್ಟೊಂದು ದಾರುಣವಾಗಿರುತ್ತದೆ ಅನ್ನುವುದು ಊಹಿಸಲು ಅಸಾಧ್ಯ! ರವಿಯವರ ತಾಯಿ ಹಾಗು ಹೆಂಡತಿ, ರವಿಯವರ ಶವದ ಮುಂದೆ ರೋಧಿಸುವುದನ್ನು ನೋಡಿದರೆ, ಎಂತಹ ಕಲ್ಲು ಮನಸ್ಸಿನ ಮನುಷ್ಯನ ಕಣ್ಣಲ್ಲೂ ನೀರು ತರಿಸುತ್ತದೆ; ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ರಾಜ್ಯದ ಕೆಲವೇ ಕೆಲವು ಪ್ರಾಮಾಣಿಕ(ಮಾಜಿ), ಸಂವೇದನಶೀಲ(ಮಾಜಿ) ರಾಜಕಾರಣಿ ಎಂದು ಹೆಸರು ಪಡೆದಿದ್ದ ಸಿದ್ದರಾಮಯ್ಯನವರಿಗೆ ಏನು ಅನ್ನಿಸುತ್ತಿಲ್ಲ ಎಂದರೆ, ಇದಕ್ಕಿಂತ ವಿಪರ್ಯಾಸ ಇನ್ನೊಂದಿಲ್ಲ! ಬಹುಶಃ ಅವರ ಈ ಸಂವೇದನರಹಿತ ಒರಟು ನಡಾವಳಿಗಳ ಪ್ರತಿಫಲವನ್ನು ಅನುಭವಿಸುವ ದೂರ ಇಲ್ಲ. ಜನರು ಈ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಇದು ಸಮಾಜದ ಎಲ್ಲ ಪ್ರಾಮಾಣಿಕ ವ್ಯಕ್ತಿಗಳ ಸ್ವಾಭಿಮಾನ ಕೆಣಕಿರುವ ಸನ್ನಿವೇಶ.ಈ ಪ್ರಕರಣವನ್ನು ನಾವು ಸಾಯುವವರೆಗೂ ನೆನಪಿನಲ್ಲಿ ಇಡುತ್ತೇವೆ. ರವಿಯವರು ಸಾವನ್ನಪ್ಪಿದಾಗ ಈಡೀ ಕೋಲಾರದ ಜನತೆ ಮಮ್ಮುಲ ಮರಗಿದರು. ಅವರ ಅಂತಿಮಯಾತ್ರೆಗೆ ಕಿಕ್ಕಿರಿದು ಜನಸಾಗರ ಸೇರಿತ್ತು.ಬಹುಶಃ ರಾಜಕುಮಾರ್ ಅವರ ಅಂತಿಮಯಾತ್ರೆಯನ್ನು ಹೊರತುಪಡಿಸಿ, ಇನ್ಯಾರ ಅಂತಿಮಯತ್ರೆಯಲ್ಲಿಯೂ ಇಷ್ಟೊಂದು ಜನ ಸೇರಿರಲಿಲ್ಲ.
ಡಿ.ಕೆ. ರವಿ ಯವರು ಕೋಲಾರದಿಂದ ವರ್ಗಾವಣೆಯಾದಾಗ ಸಿಹಿ ಹಂಚಿದ ಶಾಸಕ ಮಹಾಶಯರೇ, ನೀವು ಇಷ್ಟೊಂದು ಜನರನ್ನು ಸಂಪಾದಿಸಿದ್ದೀರಾ?
ಕೊನೆಯ ಮಾತು: The duty of a true patriot is to protect his country from its government.
ಮೇಲಿನ ಸಾಲು ಅಕ್ಷರಸಹ ನಿಜ.
And We will do it.
RIP Officer. We just not salute you for your work, we will follow your foot prints.
Jai Hind

1/1/15

ಮರಳಿ ಕರೆವ ಮರವಂತೆ!!

ಕರ್ನಾಟಕದ ಅತ್ಯಂತ ಸುಂದರ ಕಡಲ ಕಿನಾರೆಗಳಲ್ಲಿ ಮರವಂತೆಯು ಒಂದು. ತನ್ನ ಒಂದು ಬದಿಯಲ್ಲಿ ಅರಬ್ಬೀ ಸಮುದ್ರ ಹಾಗು ಇನ್ನೊದು ಬದಿಯಲ್ಲಿ ಸೌಪರ್ಣಿಕ ನದಿಯನ್ನು ಹೊಂದಿರುವ ಈ ಪಟ್ಟಣವು ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ. ಸೌಪರ್ಣಿಕ ನದಿಯು ಸುಂದರ ದ್ವೀಪವನ್ನು ಇಲ್ಲಿ ಸೃಷ್ಟಿ ಮಾಡಿದೆ. ಸುತ್ತಲೂ ತೆಂಗಿನ ಮರಗಳಿಂದ ಸುತ್ತುವರಿದಿರುವ ಈ ದ್ವೀಪದಲ್ಲಿ ದೋಣಿವಿಹಾರ ಅತ್ಯಂತ ಆಹ್ಲಾದಕರ ಅನುಭವ. ಸೌಪರ್ಣಿಕ ನದಿಯ ತಟದಲ್ಲಿ ವರಾಹ ಸ್ವಾಮಿ ದೇವಸ್ಥಾನ (ಮಾರಸ್ವಾಮಿ) ದೇವಸ್ಥಾನ ತನ್ನ ಅನೇಕ ವಿಶೇಷತೆಗಳಿಂದ ಹೆಸರು ಮಾಡಿದೆ. ಕೆಲವೇ ಕೆಲವು ವಿಷ್ಣುವಿನ ವರಾಹ ಅವತಾರವನ್ನು ಪೂಜಿಸಲ್ಪಡುವ ದೇವಸ್ಥಾನಗಳಲ್ಲಿ ಇದು ಕೂಡ ಒಂದು. ಇಲ್ಲಿ ಆಮೆ ಹಾಗು ಮೊಸಳೆಗಳು ಸಹ ಪೂಜಿಸಲ್ಪಡುತ್ತದೆ.

ಮರವಂತೆಯ ಬಹುದೊಡ್ಡ ಆಕರ್ಷಣೆ ಇಲ್ಲಿನ ಬಹುಸುಂದರ ಕಡಲ ಕಿನಾರೆ. ದಿಗಂತದಾಚೆಗೆ ಹರಡಿಕೊಂಡಿರುವ ಬೆಳ್ಳನೆಯ ಮರಳ ರಾಶಿ ನೋಡುಗರನ್ನು ಮುದಗೊಳಿಸುತ್ತದೆ. ದೂರದಲ್ಲಿ ಮೀನುಗಾರಿಕೆಯ ದೋಣಿಗಳ ನಡುವೆ ಅಸ್ತಂಗತ ಹೊಂದುವ ಸೂರ್ಯ ಈಡೀ ಸಮುದ್ರಕ್ಕೆ ಕೆಂಪು ಹೊದಿಕೆ ಹೊದಿಸುತ್ತಾನೆ. ಆಗುಂಬೆಯಷ್ಟು ಪ್ರಖ್ಯಾತಿಯನ್ನು ಹೊಂದಿಲ್ಲದ ಇಲ್ಲಿನ ಸೂರ್ಯಾಸ್ತಮಾನ ಖಂಡಿತ ಪ್ರವಾಸಿಗರನ್ನು ನಿರಾಸೆಗೊಳಿಸುವುದಿಲ್ಲ. ಸೂರ್ಯಾಸ್ತಮಾನ ವೀಕ್ಷಣೆ ಗಾಗಿಯೆ ಇಲ್ಲಿ ಕಲ್ಲು ಬೆಂಚುಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಮುದ್ರಕ್ಕೆ ಇಳಿಯುವುದು ತುಸು ಅಪಾಯಕಾರಿ. ಅಲೆಗಳ ರಭಸವು ಸಹ ಇಲ್ಲಿ ತುಸು ಹೆಚ್ಚು. ಕಡಲ ಕಿನಾರೆ ಹಾಗೂ ಸೌಪರ್ಣಿಕ ನದಿಗಳ ನಡುವೆ ರಾಷ್ಟೀಯ ಹೆದ್ದಾರಿ ೧೭ (ಮಂಗಳೂರು - ಪೂನ) ಹೆದ್ದಾರಿ ಹಾದು  ಹೋಗುತ್ತದೆ. ಸೌಪರ್ಣಿಕ ನದಿ,ಈ ಪ್ರದೇಶದಲ್ಲಿ ಸಮುದ್ರಕ್ಕೆ ಕೆಲವೇ ಅಡಿಗಳಷ್ಟು ದೂರದಲ್ಲಿದೆ. ಆದರೂ ಮುಂದೆ ತಿರುವು ತೆಗೆದುಕೊಳ್ಳುವ ನದಿ, ಸಮುದ್ರವನ್ನು ಸೇರುವುದು ೧೦ ಕಿಲೋಮೀಟರುಗಳ ನಂತರ.ಇಲ್ಲಿನ  ಸುಂದರ ಹಚ್ಚ ಬಿಳುಪಿನ ಮರಳರಾಶಿಯ ಕಾರಣದಿಂದ ಇಲ್ಲಿಗೆ "ವರ್ಜಿನ್ ಬೀಚ್" ಎನ್ನುವ ಇನ್ನೊಂದು ಹೆಸರು ಸಹ ಇದೆ.
ಮರವಂತೆ ಕುಂದಾಪುರದಿಂದ ಕೇವಲ ೧೭, ಕೊಲ್ಲೂರಿನಿಂದ ೧೭ ಕಿಲೋಮೀಟರುಗಳಷ್ಟು ದೂರದಲ್ಲಿದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಇಲ್ಲಿ ಸಾಕಷ್ಟು ವ್ಯವಸ್ಥೆಗಳಿದೆ. ಕುಂದಾಪುರ , ಕೊಲ್ಲೂರು ಹಾಗೂ ಬೈಂದೂರು ಹತ್ತಿರದ ಪಟ್ಟಣಗಳು. ಉಡುಪಿಯಿಂದ ಕೇವಲ ೫೪ ಕಿಲೋಮೀಟರುಗಳ ದೂರದಲ್ಲಿದೆ.