1/1/15

ಮರಳಿ ಕರೆವ ಮರವಂತೆ!!

ಕರ್ನಾಟಕದ ಅತ್ಯಂತ ಸುಂದರ ಕಡಲ ಕಿನಾರೆಗಳಲ್ಲಿ ಮರವಂತೆಯು ಒಂದು. ತನ್ನ ಒಂದು ಬದಿಯಲ್ಲಿ ಅರಬ್ಬೀ ಸಮುದ್ರ ಹಾಗು ಇನ್ನೊದು ಬದಿಯಲ್ಲಿ ಸೌಪರ್ಣಿಕ ನದಿಯನ್ನು ಹೊಂದಿರುವ ಈ ಪಟ್ಟಣವು ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ. ಸೌಪರ್ಣಿಕ ನದಿಯು ಸುಂದರ ದ್ವೀಪವನ್ನು ಇಲ್ಲಿ ಸೃಷ್ಟಿ ಮಾಡಿದೆ. ಸುತ್ತಲೂ ತೆಂಗಿನ ಮರಗಳಿಂದ ಸುತ್ತುವರಿದಿರುವ ಈ ದ್ವೀಪದಲ್ಲಿ ದೋಣಿವಿಹಾರ ಅತ್ಯಂತ ಆಹ್ಲಾದಕರ ಅನುಭವ. ಸೌಪರ್ಣಿಕ ನದಿಯ ತಟದಲ್ಲಿ ವರಾಹ ಸ್ವಾಮಿ ದೇವಸ್ಥಾನ (ಮಾರಸ್ವಾಮಿ) ದೇವಸ್ಥಾನ ತನ್ನ ಅನೇಕ ವಿಶೇಷತೆಗಳಿಂದ ಹೆಸರು ಮಾಡಿದೆ. ಕೆಲವೇ ಕೆಲವು ವಿಷ್ಣುವಿನ ವರಾಹ ಅವತಾರವನ್ನು ಪೂಜಿಸಲ್ಪಡುವ ದೇವಸ್ಥಾನಗಳಲ್ಲಿ ಇದು ಕೂಡ ಒಂದು. ಇಲ್ಲಿ ಆಮೆ ಹಾಗು ಮೊಸಳೆಗಳು ಸಹ ಪೂಜಿಸಲ್ಪಡುತ್ತದೆ.

ಮರವಂತೆಯ ಬಹುದೊಡ್ಡ ಆಕರ್ಷಣೆ ಇಲ್ಲಿನ ಬಹುಸುಂದರ ಕಡಲ ಕಿನಾರೆ. ದಿಗಂತದಾಚೆಗೆ ಹರಡಿಕೊಂಡಿರುವ ಬೆಳ್ಳನೆಯ ಮರಳ ರಾಶಿ ನೋಡುಗರನ್ನು ಮುದಗೊಳಿಸುತ್ತದೆ. ದೂರದಲ್ಲಿ ಮೀನುಗಾರಿಕೆಯ ದೋಣಿಗಳ ನಡುವೆ ಅಸ್ತಂಗತ ಹೊಂದುವ ಸೂರ್ಯ ಈಡೀ ಸಮುದ್ರಕ್ಕೆ ಕೆಂಪು ಹೊದಿಕೆ ಹೊದಿಸುತ್ತಾನೆ. ಆಗುಂಬೆಯಷ್ಟು ಪ್ರಖ್ಯಾತಿಯನ್ನು ಹೊಂದಿಲ್ಲದ ಇಲ್ಲಿನ ಸೂರ್ಯಾಸ್ತಮಾನ ಖಂಡಿತ ಪ್ರವಾಸಿಗರನ್ನು ನಿರಾಸೆಗೊಳಿಸುವುದಿಲ್ಲ. ಸೂರ್ಯಾಸ್ತಮಾನ ವೀಕ್ಷಣೆ ಗಾಗಿಯೆ ಇಲ್ಲಿ ಕಲ್ಲು ಬೆಂಚುಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಮುದ್ರಕ್ಕೆ ಇಳಿಯುವುದು ತುಸು ಅಪಾಯಕಾರಿ. ಅಲೆಗಳ ರಭಸವು ಸಹ ಇಲ್ಲಿ ತುಸು ಹೆಚ್ಚು. ಕಡಲ ಕಿನಾರೆ ಹಾಗೂ ಸೌಪರ್ಣಿಕ ನದಿಗಳ ನಡುವೆ ರಾಷ್ಟೀಯ ಹೆದ್ದಾರಿ ೧೭ (ಮಂಗಳೂರು - ಪೂನ) ಹೆದ್ದಾರಿ ಹಾದು  ಹೋಗುತ್ತದೆ. ಸೌಪರ್ಣಿಕ ನದಿ,ಈ ಪ್ರದೇಶದಲ್ಲಿ ಸಮುದ್ರಕ್ಕೆ ಕೆಲವೇ ಅಡಿಗಳಷ್ಟು ದೂರದಲ್ಲಿದೆ. ಆದರೂ ಮುಂದೆ ತಿರುವು ತೆಗೆದುಕೊಳ್ಳುವ ನದಿ, ಸಮುದ್ರವನ್ನು ಸೇರುವುದು ೧೦ ಕಿಲೋಮೀಟರುಗಳ ನಂತರ.ಇಲ್ಲಿನ  ಸುಂದರ ಹಚ್ಚ ಬಿಳುಪಿನ ಮರಳರಾಶಿಯ ಕಾರಣದಿಂದ ಇಲ್ಲಿಗೆ "ವರ್ಜಿನ್ ಬೀಚ್" ಎನ್ನುವ ಇನ್ನೊಂದು ಹೆಸರು ಸಹ ಇದೆ.
ಮರವಂತೆ ಕುಂದಾಪುರದಿಂದ ಕೇವಲ ೧೭, ಕೊಲ್ಲೂರಿನಿಂದ ೧೭ ಕಿಲೋಮೀಟರುಗಳಷ್ಟು ದೂರದಲ್ಲಿದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಇಲ್ಲಿ ಸಾಕಷ್ಟು ವ್ಯವಸ್ಥೆಗಳಿದೆ. ಕುಂದಾಪುರ , ಕೊಲ್ಲೂರು ಹಾಗೂ ಬೈಂದೂರು ಹತ್ತಿರದ ಪಟ್ಟಣಗಳು. ಉಡುಪಿಯಿಂದ ಕೇವಲ ೫೪ ಕಿಲೋಮೀಟರುಗಳ ದೂರದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ