ಈ ಭಾರಿಯ ಲೋಕಸಭಾ ಚುನಾವಣೆ ಭಾರತದ ಇತಿಹಾಸದಲ್ಲಿಯೇ ಅತ್ಯಂತ ವಿಶೇಷವಾದದ್ದು ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.ಭಾರತದ ಎಲ್ಲಲೋಕಸಭಾ ಚುನಾವಣೆಗಳು ನಡೆದದ್ದು ಒಂದೋ ಕಾಂಗ್ರೆಸ್ ಪರವಾದ ಅಲೆ ಅಥವಾ ವಿರೋಧಿ ಅಲೆಯ ಹಿನ್ನೆಲೆಯಲ್ಲಿ.ಅಭಿವೃದ್ಧಿ ಹಾಗು ಬಲಿಷ್ಠ ರಾಷ್ಟ್ರದ ಪರಿಕಲ್ಪನೆಯ ಚಿಂತನೆಗಳ ಹಿನ್ನೆಲೆಯಲ್ಲಿ ನಡೆದ ಚುನಾವಣೆಗಳು ಬಹಳ ಕಡಿಮೆಯೇ.ಅಟಲ್ ಬಿಹಾರಿ ವಾಜಪೇಯೀಯವರನ್ನು ಹೊರತು ಪಡಿಸಿದರೆ,ಕಾಂಗ್ರೆಸ್ಸೇತರ ಪ್ರಧಾನಿಗಳು ೫ ವರ್ಷ ಅಧಿಕಾರ ಪೂರೈಸಿದ ಯಾವ ಉದಾಹರಣೆಗಳೂ ನಮ್ಮ ಮುಂದಿಲ್ಲ.ಎರಡು ದಶಕಗಳಿಂದ ಈ ದೇಶ ಕಂಡದ್ದು ಕೇವಲ ಸಮ್ಮಿಶ್ರ ಸರಕಾರಗಳನ್ನೇ.ದೇಶದ ಚುನಾವಣೆಗಳಲ್ಲಿ ಯುವಕರ ಭಾಗವಹಿಸುವಿಕೆಯು ಸಹ ಗಣನೀಯವಾಗಿ ಕುಸಿತ ಕಂಡಿತ್ತು.ಆದರೆ ೨೦೧೪ ರ ಚುನಾವಣೆ,ಕೇವಲ ಚುನಾವಣೆ ಅಗಿರದೇ,ಒಂದು ಪರ್ವದ ರೀತಿಯಲ್ಲಿ ಆಗಮಿಸಿತ್ತು.ಜನ ಅತ್ಯಂತ ಉತ್ಸುಕರಾಗಿ ಮತದಾನದಲ್ಲಿ ಭಾಗವಹಿಸಿದರು.ಬರೋಬ್ಬರಿ ೬೭% ಮತದಾನ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ದಾಖಲಾಗಿದೆ.ಎಲ್ಲಕ್ಕಿಂತ ವಿಶೇಷ,ಒಂದು ವಿಷಯಾಧಾರಿತ ಚುನಾವಣೆ ಈ ಭಾರಿ ನಡೆದದ್ದು ಹಾಗೂ ಒಂದು ಪಕ್ಷ ಸ್ವತಂತ್ರವಾಗಿ ಸರಕಾರ ರಚನೆ ಮಾಡಿದ್ದು.ನರೇಂದ್ರ ಮೋದಿಯವರ ಮೋಡಿಗೆ ಕಾಂಗ್ರೆಸ್ ನುಚ್ಚುನೂರಾಯಿತು.
ಆದರೆ ಇಡೀ ದೇಶವನ್ನು ಈ ಮಟ್ಟದಲ್ಲಿ ಜಾಗೃತಗೊಳಿಸುವಲ್ಲಿ ನರೇಂದ್ರ ಮೋದಿಯವರ ಶ್ರಮ ಮೆಚ್ಚಬೇಕಾದದ್ದು.ಪ್ರತಿಯೊಬ್ಬ ಪ್ರಜೆಯಲ್ಲಿಯೂ ದೊಡ್ಡ ದೊಡ್ಡ ಕನಸುಗಳನ್ನು ಅವರು ಬಿತ್ತಿದ್ದಾರೆ.ಆ ಕನಸುಗಳು ಇವತ್ತು ದೊಡ್ಡ ದೊಡ್ಡ ನಿರೀಕ್ಷೆಗಳಾಗಿ ಬದಲಾಗಿವೆ.ಒಬ್ಬ ದೊಡ್ಡ ಕೈಗಾರಿಕೋದ್ಯಮಿ ಇಂದ,ಒಬ್ಬ ಸಾಮಾನ್ಯ ಕೂಲಿಯವರೆಗೂ ಎಲ್ಲರು ಮೋದಿಯವರ ಮೇಲೆ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.ಎಲ್ಲವನ್ನು ಮೋದಿಯವರೇ ಸರಿ ಮಾಡಲಿದ್ದಾರೆ ಅನ್ನುವ ರೀತಿಯ ನೀರಿಕ್ಷೆಗಳು ಇವು.ಒಟ್ಟಾರೆ ಮೋದಿಯವರನ್ನು ಒಬ್ಬ ಯುಗಪುರುಷನ ರೀತಿ ಜನ ನೋಡುತ್ತಿದ್ದಾರೆ.ಆದರೆ ನಿಜವಾದ ಸಮಸ್ಯೆ ಶುರುವಾಗುವುದೇ ಇಲ್ಲಿಂದ.
ಯುಪಿಏ ಸರಕಾರದ ಹಗರಣಗಳು ಒಂದೊಂದಾಗಿ ಹೊರಗೆ ಬರುತ್ತಿದ್ದ ದಿನಗಳನ್ನು ಒಮ್ಮೆ ನೆನೆಸಿಕೊಂಡರೆ ಹಾಗೂ ಇವತ್ತಿನ ಸನ್ನಿವೇಶಕ್ಕೆ ಹೋಲಿಕೆ ಮಾಡಿ ನೋಡಿದರೆ,ನಮಗೆ ಒಂದು ವಿಚಾರ ಸ್ಪಷ್ಟವಾಗುತ್ತದೆ.ನಮ್ಮ ಜನ,ಇವತ್ತಿನ ಮಟ್ಟಕ್ಕೆ ಸರಕಾರದ ನಿರ್ಧಾರಗಳ ಬಗ್ಗೆ ನಿರ್ಲಿಪ್ತ ಭಾವನೆಯನ್ನು ಹೊಂದಿಲ್ಲ.ಸರ್ಕಾರದ ಪ್ರತಿಯೊಂದು ನಿರ್ಧಾರಗಳು ಸಾರ್ವಜನಿಕ ವಲಯದಲ್ಲಿ ವಿಸ್ತೃತ ಚರ್ಚೆಗಳಿಗೆ ಒಳಗಾಗುತ್ತಿವೆ.ಉದಾಹರಣೆಗೆ 2G ಹಗರಣದಂತಹ ದೊಡ್ಡ ಹಗರಣಗಳ ಬಗ್ಗೆ ನಿರ್ಲಿಪ್ತ ಭಾವನೆಹೊಂದಿದ್ದ ನಮ್ಮ ಜನ,ಕಪ್ಪು ಹಣ ವಾಪಾಸ್ ತರುವ ಬಗ್ಗೆ ಇರುವ ಗೊಂದಲಗಳ ಬಗ್ಗೆ ಪ್ರಶ್ನೆಗಳನ್ನ ಕೇಳುವ ಮಟ್ಟಕ್ಕೆ ಬದಲಾಗಿದ್ದಾನೆ.ಅಂದರೆ ಹಗರಣರಹಿತ ಸರ್ಕಾರ ಕೊಡುವುದಷ್ಟೇ ಅಲ್ಲ,ಕೊಟ್ಟ ಅಷ್ಟೂ ಭರವಸೆಗಳನ್ನು ಇಡೇರಿಸುವ ಕೆಲಸವನ್ನ ಮೋದಿ ಸರ್ಕಾರ ಅತ್ಯಂತ ನಾಜೂಕಾಗಿ ಮಾಡಬೇಕಾಗಿದೆ.ಇಲ್ಲವಾದಲ್ಲಿ ಮುಂದೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಈಗಿನಿಂದಲೇ ತಯಾರಿಮಾಡಿಕೊಳ್ಳಬೇಕು.
ಪ್ರಸಕ್ತ ಈ ಸರ್ಕಾರದ ಸಾಧನೆ ಅತ್ಯಂತ ತೃಪ್ತಿದಾಯಕವಾಗಿಯೇ ಇದೆ.ಪ್ರಧಾನಮಂತ್ರಿಯವರು ಪ್ರತಿಯೊಂದು ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಹಾಗೂ ನಿಷ್ಠೆಯಿಂದ ಮಾಡುತ್ತಿದ್ದಾರೆ."ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಅನ್ನುವ ತಮ್ಮ ಚುನಾವಣಾ ಉದ್ಗಾರವನ್ನು ಮೋದಿಯವರು ಚಾಚುತಪ್ಪದೆ ಪಾಲಿಸುತ್ತಿದ್ದಾರೆ.ಆಡಳಿತದಲ್ಲಿ ಜನರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ.ಆದರೂ ಕಪ್ಪು ಹಣವನ್ನು ದೇಶಕ್ಕೆ ವಾಪಾಸು ತರುವಂತಹ ಗಂಭೀರ ವಿಚಾರಗಳ ಬಗ್ಗೆ ಸರ್ಕಾರದ ವರಸೆ ಬದಲಾದಂತೆ ಭಾಸವಾಗುತ್ತಿದೆ.ಅರುಣ್ ಜೈಟ್ಲೀ ಅವರ ಮಾತು ಇದನ್ನು ಪುಷ್ಟೀಕರಿಸುತ್ತಿದೆ.ಜನಲೋಕಪಾಲ್ ನಂತಹ ಮಂತ್ರ ದಂಡವನ್ನು ಭಾರತೀಯ ಪ್ರಜೆಯ ಕೈಗೆ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಅತ್ಯಂತ ವ್ಯವಸ್ಥಿತವಾಗಿ ಸರ್ಕಾರ ಜಾರಿಕೊಳ್ಳುತ್ತಿದೆ ಅನ್ನುವ ಅನುಮಾನ ಕೂಡ ಅನೇಕ ಜನರಲ್ಲಿ ಮೂಡುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ,ದೊಡ್ಡ ದೊಡ್ಡ ನಿರೀಕ್ಷೆಗಳಾಗಿ ಬದಲಾಗಿರುವ ಅವರೇ ಕಟ್ಟಿಕೊಟ್ಟ ಕನಸುಗಳನ್ನು ನೆರವೇರಿಸುವುದರಲ್ಲಿ ಮೋದಿಯವರು ಅದೆಷ್ಟರ ಮಟ್ಟಿಗೆ ಸಫಲರಾಗುತ್ತರೋ ಗೊತ್ತಿಲ್ಲ.ಆದರೆ ಅವರು ತಮ್ಮ ಪ್ರಯತ್ನದಲ್ಲಿ ಗೆಲ್ಲಲಿ ಎಂದು ಆಶಿಸುವ ಪ್ರಾಮಾಣಿಕ ಹಾರೈಕೆ ನನ್ನದೂ ಸಹ.ಏಕೆಂದರೆ ಮೋದಿಯವರ ವೈಪಲ್ಯ, ನಮ್ಮ ಜನರನ್ನು ವ್ಯವಸ್ಥೆಯ ಬಗೆಗೆ ಮತ್ತೆ ನಿರ್ಲಿಪ್ತರಾಗುವಂತೆ ಮಾಡುತ್ತದೆ.ತನ್ನ ಮಕ್ಕಳಲ್ಲಿ, ದೇಶದ ಬಗೆಗಿನ ಜಾಗೃತಿಯನ್ನು ನೋಡಲು ಭಾರತ ಮಾತೆ ಮತ್ತೆ ಎರಡು ಮೂರು ದಶಕಗಳು ಕಾಯಬೇಕಾಗಬಹುದು.ಅದ್ದರಿಂದ ಮೋದಿಯವರು ತಾವು ಮಾಡುತ್ತಿರುವ ಹುಲಿಯ ಮೇಲಿನ ಸವಾರಿಯಲ್ಲಿ ಅವರಿಗೆ ಯಶಸ್ಸು ಸಿಗಲಿ ಹಾಗೂ ಕನಸುಗಳ ಬೆನ್ನೇರಿ ಹೋರಾಟ ಭಾರತೀಯರಿಗೆ ನಿರಸೆಯಾಗದಿರಲಿ ಎಂದು ಹಾರೈಸುತ್ತ ಈ ಪುಟ್ಟ ಲೇಖನವನ್ನು ಮುಗಿಸುತ್ತೇನೆ.
ಜೈ ಹಿಂದ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ