23/9/12

ಎಫ್ ಡಿ ಐ ಎಂಬ ಚಿಲ್ಲರೆ ರಾದ್ಧಾಂತ !


ನಮ್ಮ ಹಗರಣಗಳನ್ನು ಜನ ಮರೆಯುವಂತೆ ಮಾಡುವುದು ಹೇಗೆ? ಇದು ಸದ್ಯಕ್ಕೆ ಯು .ಪಿ .ಎ ಸರ್ಕಾರಕ್ಕೆ  ಕಾಡುತ್ತಿರುವ ಮಿಲಿಯನ್  ಡಾಲರ್ ಪ್ರಶ್ನೆ . ಹಿಂದೊಂದು ಕಾಲವಿತ್ತು. ಆಗ ಸರ್ಕಾರಗಳು  ತಾವು ಮಾಡಿದ ಹಗರಣಗಳನ್ನು ಜನಮಾನಸದಿಂದ ಅಳಿಸಿಹಾಕಲು ಅಭಿವೃದ್ಧಿ ಕಾರ್ಯಕ್ರಮಗಳ  ಮೊರೆ ಹೋಗುತ್ತಿದ್ದರು . ಆದರೆ ಈಗ ಕಾಂಗ್ರೆಸ್  ಹುಟ್ಟುಹಾಕಿರುವ ಟ್ರೆಂಡ್ ತುಸು  ಭಿನ್ನ . ಒಂದು ಹಗರಣ ಮರೆಸಲು ಇನ್ನೊಂದು ದೊಡ್ಡ ಹಗರಣ ಮಾಡುವುದು ನಮ್ಮ ಯು .ಪಿ .ಎ ಸರ್ಕಾರದ ಪಾಲಿಸಿ ಆಗಿಬಿಟ್ಟಿದೆ. ಕಾಮನ್ವೆಲ್ತ್  ಹಗರಣ, 2 ಜಿ  ಹಗರಣ ,ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಕಲ್ಲಿದ್ದಲು ಹಗರಣ ಹಾಗು ಲೇಟೆಸ್ಟ್ ಅಡಿಶನ್ ಥೋರಿಯಂ ಹಗರಣ. ಪಟ್ಟಿ ಹೀಗೆ ಬೆಳೆಯುತ್ತಾ ಹೋದರೆ ನಮ್ಮ ಜನ ಹೇಗೆ ತಾನೇ ಹಗರಣಗಳನ್ನು ಮರೆಯದೇ  ಇರುತ್ತಾರೆ? ಆದರೂ ಇತ್ತೀಚೆಗೆ ಕಾಂಗ್ರೆಸ್ಸಿನ ಯು .ಪಿ .ಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ ಹಗರಣಗಳು ಕಲ್ಲಿದ್ದಲು ಹಾಗೂ ಥೋರಿಯಂ ಹಗರಣಗಳು. ಒಂದಿಡೀ ಸಂಸತ್ ಅಧಿವೇಶನವನ್ನೇ ಬಲಿತೆಗೆದುಕೊಂಡ ಈ ಹಗರಣಗಳು ಸಾರ್ವಜನಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದವು. ವಿರೋಧ  ಪಕ್ಷಗಳು ಈ ವಿಷಯವನ್ನು ಚೆನ್ನಾಗಿ ಬಳಸಿಕೊಂಡು ಯು.ಪಿ .ಎ ಸರ್ಕಾರದ ಮಾನ ಹರಾಜು ಹಾಕಿದ್ದವು. ಆದರೆ ಇವೆಲ್ಲವೂ ಒಮ್ಮಿಂದೊಮ್ಮೆಗೆ ತಣ್ಣಗಾಗುವಂತೆ ಮಾಡಿದ ಇಶ್ಯೂ ಡೀಸೆಲ್  ಬೆಲೆ ಏರಿಕೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ.  ಕಾಂಗ್ರೆಸ್ ನ ನಿರೀಕ್ಷೆಯಂತೆ ಹಗರಣಗಳ ಕಡೆಗೆ ಇದ್ದ ಜನರ ಗಮನವನ್ನು ಇದು ಬೇರೆಡೆಗೆ ಸೆಳೆದಿದೆ. ಒಂದು ಕಡೆ ಪೆಟ್ರೋಲಿಯಂ ಕಂಪೆನಿಗಳ ಅಸೆ ಈಡೇರಿಸಿದ ಸರ್ಕಾರ ಸಾಮಾನ್ಯ ಜನತೆಯ ನೆಮ್ಮದಿಯ ಜೀವನಕ್ಕೆ ಕೊಡಲಿ ಪೆಟ್ಟು ನೀಡಿದರೆ , ಇನ್ನೊಂದೆಡೆ ಎಫ್ .ಡಿ .ಐ ಮುಖೇನ ಪೊಳ್ಳು ಭರವಸೆಗಳ ಸರಮಾಲೆಯನ್ನೇ ನೀಡಿದೆ. ಇನ್ನು ಚರ್ಚೆಯ ಹಂತದಲ್ಲಿದ್ದ ಎಫ್ .ಡಿ .ಐ, ಏಕಾಏಕಿ  ಅನುಷ್ಟಾನ ಗೊಂಡಿದೆ. ಅದೂ ಸಹ ಬರೋಬ್ಬರಿ  51%.  ಎಫ್ .ಡಿ .ಐ  ಒಂದು ಮಹಾ  ಅರ್ಥಿಕ ಸುಧಾರಣೆ ಎಂದು ಸರ್ಕಾರ ಬಣ್ಣಿಸುತ್ತಿದ್ದರೆ, ವಿರೋಧ ಪಕ್ಷಗಳು  ಎಫ್ .ಡಿ .ಐ  ನಮ್ಮ ದೇಶದ ಚಿಲ್ಲರೆ ಮಾರುಕಟ್ಟೆಯನ್ನು ವಿದೇಶೀಯರಿಗೆ ಒಪ್ಪಿಸುವ ಹುನ್ನಾರ ಎಂದು ಬೊಬ್ಬೆ ಹಾಕುತ್ತಿವೆ. ಇವರಿಬ್ಬರ ವಾದ-ವಿವಾದ  ಕೇಳಿ ಸಾಮಾನ್ಯ ಜನತೆ ಜಿಜ್ಞಾಸೆಯಲ್ಲಿದೆ. ಆದರೆ ಅಸಲಿಗೆ  ಎಫ್ .ಡಿ .ಐ   ಅಂದರೆ  ಏನು ? ನಮ್ಮ ದೇಶಕ್ಕೆ ಇದು ಅವಶ್ಯಕವೇ ?  ಎಫ್ .ಡಿ .ಐ  ನ ಉಪಯೋಗಗಳು ಹಾಗೂ  ದುಷ್ಪರಿಣಾಮಗಳು ಏನು? ಎಂಬ ವಿಷಯಗಳನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ.
                       
 ಜಾಗತೀಕರಣ ನಮ್ಮ ದೇಶಕ್ಕೆ ಕಾಲಿಟ್ಟ ಸಮಯವನ್ನು ನೆನಪಿಸಿಕೊಳ್ಳಿ ,ಜಾಗತೀಕರಣದಿಂದ ನಮ್ಮದೇಶ ಬಹಳ ಬೇಗ ಅಭಿವೃದ್ದಿ ಹೊಂದುತ್ತದೆ ಎಂದೆಲ್ಲ ಹೇಳಲಾಗಿತ್ತು.ಆದರೆ ವಾಸ್ತವದಲ್ಲಿ ನಾವು ಹೊರರಾಷ್ಟ್ರಗಳ ಉತ್ಪನ್ನಗಳಿಗೆ ಶಾಶ್ವತ ಬಳಕೆದಾರರಾಗಿಬಿಟ್ಟೆವು. ಇದರಿಂದ ನಮ್ಮದೇ ಮಾರುಕಟ್ಟೆಯನ್ನು ನಾವು ಇತರರಿಗೊಪ್ಪಿಸಿ ಸುಮ್ಮನೆ ಕೂರುವಂತಾಯಿತು. ಒಂದು ಟಾಯ್ಲೆಟ್ ಸೋಪಿನಿಂದ ಹಿಡಿದು ಮೊಬೈಲ್ ಫೋನ್ ಗಳ ವರೆಗೆ ಎಲ್ಲವನ್ನೂ ಉತ್ಕೃಷ್ಟ ಗುಣಮಟ್ಟದಲ್ಲಿ ನಾವು ಪಡೆಯುತ್ತೇವೆ ನಿಜ. ಆದರೆ ಅಭಿವೃದ್ದಿ ಹೊಂದುತ್ತಿರುವುದು ಮಾತ್ರ ಯಾವುದೋ ದೇಶದ ಉದ್ಯಮಿ . ಒಂದು ದೇಶದ ನಿಜವಾದ ಅಭಿವೃದ್ದಿಯನ್ನು ಅದರ ಉತ್ಪಾದನೆಯಿಂದ ಅಳೆಯಲಾಗುತ್ತದೆ. ಕೈಯಲ್ಲಿ ಸಾಮ್ಸಂಗ್,ನೋಕಿಯಾ  ಸ್ಮಾರ್ಟ್  ಫೋನ್ ಗಳನ್ನು ಹಿಡಿದು ಓಡಾಡಿದರೆ ನಾವು ಅಭಿವೃದ್ದಿ ಹೊಂದಿದ್ದೇವೆ ಎಂದು ಬೀಗುವುದಲ್ಲ . ಒಂದು ಉತ್ತಮ  ಗುಣಮಟ್ಟದ ಮೊಬೈಲ್ ಗಳನ್ನ ತಯಾರಿಸಬಲ್ಲ ಸ್ವದೇಶೀ ಮೊಬೈಲ್ ಕಂಪನಿಯನ್ನು ಹುಟ್ಟುಹಾಕಲಾಗದ ನಮ್ಮ ಅಸಮರ್ಥತೆಯನ್ನು ಶಪಿಸಿಕೊಳ್ಳಬೇಕು.ಜಾಗತೀಕರಣದಿಂದ ನಮ್ಮ ದೇಶ ಬಳಕೆದಾರರ ಇಷ್ಟೇಕೆ ರಾಷ್ಟ್ರವಾಯಿತೇ  ವಿನಃ ಉತ್ಪಾದಕ ರಾಷ್ಟ್ರವಾಗಿಲ್ಲ. ಇವೆಲ್ಲವನ್ನೂ ಬದಿಗಿರಿಸಿ ಕೇವಲ ಗುಣಮಟ್ಟದ  ಕಡೆಗೆ ನೋಡುವುದಾದರೂ  ಜಾಗತೀಕರಣದಿಂದ ಹಲವಾರು ಸಮಸ್ಯೆಗಳನ್ನ ನಾವು ಹೆದುರಿಸುತ್ತಿದ್ದೇವೆ. ಉದಾಹರಣೆಗೆ ನಾವು ಕೊಂಡುಕೊಳ್ಳುವ ಅನೇಕ ಔಷದಿಗಳು ವಿಶ್ವದಾದ್ಯಂತ  ನಿಷೇಧಿತವಾದದ್ದು. ಅಮೇರಿಕಾ ತನ್ನ ನೆಲದಲ್ಲಿ  ನಿಷೆಧಗೊಂಡ ಅನೇಕ ಕಂಪೆನಿಗಳಿಗೆ  ಭಾರತದಲ್ಲಿ ವ್ಯವಹರಿಸಲು ಸಹಕಾರ ನೀಡುತ್ತಿದೆ.ಜಾಗತೀಕರಣದ ಕಾರಣದಿಂದ  ಇವೆಲ್ಲವನ್ನು ನಾವು ಸಹಿಸಿಕೊಳ್ಳಬೇಕಾಗಿದೆ.ಕೋಲ  ಕಂಪನಿ ಯನ್ನೇ  ತೆಗೆದುಕೊಳ್ಳಿ, ಗುಣಮಟ್ಟದ ಕಾರಣಕ್ಕಾಗಿ ಅಪಾಯಕಾರಿಯೆಂದು ಪರಿಗಣಿಸಲ್ಪಟ್ಟು ಭಾರತದಲ್ಲಿ ನಿಷೇದಗೊಂಡಿದ್ದ ಅದು ಜಾಗತೀಕರಣದ ಮುಖವಾಡದೊಂದಿಗೆ ಮತ್ತೆ ಭಾರತಕ್ಕೆ ಕಾಲಿಟ್ಟು  ಕೋಟ್ಯಾಂತರ ಬಿಲಿಯನ್ ಡಾಲರ್ ಲಾಭ ಮಾಡಿಕೊಂಡಿದೆ.ಇಂತಹ ಅನೇಕ ಕಂಪನಿಗಳು ಭಾರತದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಜಾಗತೀಕರಣದಿಂದ ರೈತರು ಹೆದುರಿಸುತ್ತಿರುವ  ಸಮಸ್ಯೆಗಳನ್ನು  ವಿವರಿಸಲು ಪುಸ್ತಕವನ್ನೇ ಬರೆಯಬೇಕಾಗುತ್ತದೆ.ಆದರೂ ಜಾಗತೀಕರಣ ಲಾಭದಾಯಕವೆಂದು  ಸಂಖ್ಯೆ ಬಹಳಷ್ಟಿದೆ. ಎಫ್ .ಡಿ .ಐ  ಈ ಜಾಗತೀಕರಣ ಎಂಬ ನಾಟಕದ ಮುಂದುವರೆದ ಭಾಗ. ಕೇವಲ ಸಾಮಾನ್ಯ ಜನತೆ ಮಾತ್ರವಲ್ಲ, ಅರ್ಥಿಕ ವಿಶ್ಲೇಷಕರಿಗೂ  ಎಫ್ .ಡಿ .ಐ ಬಗ್ಗೆ ಪರ-ವಿರೋಧ ನಿಲುವುಗಳಿವೆ. ಅಷ್ಟರ ಮಟ್ಟಿಗೆ ಜನತೆಯನ್ನು ಗೊಂದಲಕ್ಕೆ ತಳ್ಳಿ ಸಧ್ಯದ ಮಟ್ಟಿಗೆ ಯು .ಪಿ .ಎ ಹಗರಣಗಳ ಸುಳಿಯಿಂದ  ಪಾರಾಗಿದೆ. ಆದರೆ ಹಬ್ಬ  ತಪ್ಪಿದರೂ ಹೋಳಿಗೆ ತಪ್ಪುವುದಿಲ್ಲ  ಎನ್ನುವುದನ್ನು ಅದು ಮರೆಯಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ