13/1/12

ವಿವೇಕಾನಂದರ ೧೫೦ನೇ ಜಯಂತಿ


















"ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು  ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ , ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿವೊಂದು ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರಿಸುವುದಕ್ಕೆ ಒಂದು ಕರ್ಮ ಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯು ಮಾಧುರ್ಯ,ಔದಾರ್ಯ,ಪಾವಿತ್ರ್ಯ,ಶಾಂತಿ-ಇವುಗಳಲ್ಲಿ ಮತ್ತು ಎಲ್ಲಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲ್ಲಿ ತನ್ನ ಪರಾಕಾಷ್ಟೆಯನ್ನು ಮುಟ್ಟಿದ್ದರೆ, ಅದು ಈ ಭರತ ಖಂಡವೇ ಆಗಿದೆ".
ಭಾರತದ ಹಿರಿಮೆಯ ಬಗ್ಗೆ ಸ್ವಾಮೀಜಿಯವರು ಹೇಳಿದ ಮಾತುಗಳಿವು.ಸ್ವಾಮೀಜಿಯವರಿಗೆ ಪ್ರಾಚೀನ ಭಾರತದ ಬಗ್ಗೆ ಹೆಮ್ಮೆಇತ್ತು .ಆಂಗ್ಲರಾದಿಯಾಗಿ ಹಲವು ವಿದೇಶಿಗರ ಆಕ್ರಮಣಕ್ಕೆ ಒಳಗಾದ ಭಾರತ ತನ್ನ ಸಂಪತ್ತನ್ನು ಮಾತ್ರವಲ್ಲದೇ ತನ್ನ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾ ಸಾಗಿತ್ತು.ಇಂತಹ ಕಾಲಘಟ್ಟದಲ್ಲಿ ರಾಷ್ಟ್ರಜಾಗೃತಿಯನ್ನ ಉಂಟುಮಾಡಿದವರು ಸ್ವಾಮೀಜಿ.ಸ್ವಾಮೀಜಿಯವರ ಬೋಧನೆಗಳು ಕೇವಲ ಮಾತುಗಳಾಗಿರಲಿಲ್ಲ ಅದೊಂದು ಸ್ಪೂರ್ತಿಯ ಸೆಲೆಯಾಗಿರುತಿತ್ತು.ಸಾಯುವವನಲ್ಲೂ ಬದುಕುವ ಕಿಚ್ಚು ಹೊತ್ತಿಸುವ ಸಿಂಹವಾಣಿಗಳಾಗಿರುತಿತ್ತು.
                                       ದೇಶ ದೇಶಗಳನ್ನೂ ಸುತ್ತಿ ಭಾರತದ ಹಾಗೂ ಹಿಂದೂ ಧರ್ಮದ ಹಿರಿಮೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು ಸ್ವಾಮೀಜಿ.ಸ್ವಾಮೀಜಿಯವರು ಅಮೇರಿಕಾದಲ್ಲಿ ಮಾಡಿದ ಭಾಷಣ ಎಷ್ಟರಮಟ್ಟಿಗಿತ್ತೆಂದರೆ ಮಾರನೆಯ ದಿನ ಅಮೆರಿಕಾದ ಅನೇಕ ಪತ್ರಿಕೆಗಳು ಭಾರತದಂತಹ ಜ್ಞಾನಶೀಲ ರಾಷ್ಟ್ರಕ್ಕೆ,ಧರ್ಮ ಪ್ರಬುದ್ಧ ರಾಷ್ಟ್ರಕ್ಕೆ ಧರ್ಮ ಪ್ರಚಾರಕರನ್ನು ಕಳಿಸುವುದು ಅರ್ಥಹೀನ ಎಂದು ವರದಿಮಾಡಿದ್ದವು.ಸ್ವಾಮೀಜಿಯವರ ಬೋಧನೆಗಳು ವಿದೇಶಿಯರ ದಾಳಿಗೆ ಒಳಗಾಗಿದ್ದ ಭಾರತೀಯರಲ್ಲಿ ಹೊಸ ಚೈತನ್ಯ ಹುಟ್ಟಿಸಿತ್ತು.
ಸ್ವತಂತ್ರ ಸಂಗ್ರಾಮದಲ್ಲಿ ಸ್ವಾಮೀಜಿಯವರ ಪಾತ್ರ:
ಸುಭಾಷ್ ಚಂದ್ರ ಬೋಸ್,ಮಹಾತ್ಮ ಗಾಂಧೀಜಿಯವರಾದಿಯಾಗಿ  ಅನೇಕ ಸ್ವಾತಂತ್ರ ಹೋರಾಟಗಾರರು ಸ್ವಾಮೀಜಿಯವರಿಂದ ಪ್ರಭಾವಿತರಾಗಿದ್ದರು.ಅವರ ವಾಣಿಗಳೇ ಆಗಿರುತ್ತಿದ್ದವು,ಸತ್ತವನನ್ನು ಬಡಿದು ಎಚ್ಚರಿಸುತ್ತಿದ್ದವು,ಎಂತಹ ಚಾರಿತ್ರ್ಯ ಹೀನನನ್ನೂ ಸಹ ಚಾರಿತ್ರ್ಯಶೀಲನನ್ನಾಗಿ ಮಾಡಿಬಿಡುತ್ತಿದ್ದವು.ಯುವಕರು ಸಂಗಟಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದುದರ ಹಿಂದೆ ಇದ್ದ ಪ್ರೇರಣಾಶಕ್ತಿ ಸ್ವಾಮಿಜಿಯೇ ಸರಿ.
"ಏಳಿ,ಎದ್ದೇಳಿ!ಜಾಗೃತರಾಗಿ.ಗುರಿ ಸೇರುವವರೆವಿಗೂ ನಿಲ್ಲದಿರಿ" ಎಂಬ ಸಿಡಿಲಿನ ಕರೆ ಭಾರತದ ಅಂದಿನ ಯುವ ಪೀಳಿಗೆ ಬ್ರಿಟಿಷರ ವಿರುದ್ಧ ಟೊಂಕಕಟ್ಟಿನಿಲ್ಲುವಂತೆ ಪ್ರೇರೇಪಿಸಿತ್ತು.ಇದನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದರು."
ಯುವಕರಿಗೆ ಸ್ವಾಮೀಜಿ ಕೊಟ್ಟ ಕರೆ:
ಯಾವುದೇ ದೇಶದ ಏಳಿಗೆ ಅವಲಂಬಿಸಿರುವುದು ಅದರ ಶ್ರೀಮಂತಿಕೆಯ ಮೇಲೆ ಅಲ್ಲ.ಅದು ನಿಂತಿರುವುದು ಎಂತಹ ಯುವಕರನ್ನು ಅದು ತಯಾರುಮಾಡುತ್ತದೆ ಎಂಬುದರ ಮೇಲೆ.ಫ್ರಾನ್ಸ್ ಸೋತ ಒಂದು ಯುದ್ಧದ ನಂತರ ಫ್ರಾನ್ಸ್ ನ ಸೈನ್ಯಾಧಿಕಾರಿಯೊಬ್ಬ ಹೀಗೆ ಪ್ರತಿಕ್ರಿಯೆ ನೀಡುತ್ತಾನೆ "ಫ್ರಾನ್ಸ್ ಸೋತದ್ದು ಯುದ್ಧ ರಂಗದಲ್ಲಿ ಅಲ್ಲ,ಫ್ರಾನ್ಸ್ ಸೋತದ್ದು ಪ್ಯಾರಿಸ್ಸಿನ ನೃತ್ಯಕೇಂದ್ರ ಗಳಲ್ಲಿ.ನಮ್ಮ ಯುವಕರು ತಮ್ಮ ದೇಶವನ್ನು ಈ ಯುದ್ಧದಲ್ಲಿ ಬೆಂಬಲಿಸದೆ ಅಲ್ಲಿ ಕುಳಿತಿದ್ದರಿಂದ ನಾವು ಸೋತೆವು".ಆತನ ಮಾತಿನಲ್ಲಿರುವ ಅರ್ಥವನ್ನು ಗಮನಿಸಿದರೆ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಏನೆಂಬುದು ನಮಗೆ ಅರ್ಥವಾಗುತ್ತದೆ.ಆದ್ದರಿಂದಲೇ ಸ್ವಾಮೀಜಿಯವರು ಯುವಕರಿಗೆ ಅನೇಕ ಸಂದೇಶಗಳನ್ನು ನೀಡಿದ್ದಾರೆ.ಯುವ ಪೀಳಿಗೆ ಶೀಲ,ಚಾರಿತ್ರ್ಯ,ಬುದ್ಧಿ ಶಕ್ತಿ,ದೈಹಿಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.ಯುವಕರಿಗೆ ನೀಡುವ ಶಿಕ್ಷಣ ಅವರನ್ನು ಶಕ್ತಿಶಾಲಿಯನ್ನಾಗಿಸಬೇಕೆ ಹೊರತು ದುರ್ಬಲರನ್ನಾಗಿ ಅಲ್ಲ ಎಂಬುದು ಸ್ವಾಮೀಜಿಯವರ ಅನಿಸಿಕೆಯಾಗಿತ್ತು. ಸ್ವಾಮೀಜಿಯವರ ಮಾತಿನಲ್ಲಿ "ನೀವು ನಿಮ್ಮ ಮಗುವಿಗೆ ಯಾವ ಕೃಷ್ಣನ ಬಗ್ಗೆ ತಿಳಿಸಿದ್ದೀರಿ.ಗೋಕುಲದಲ್ಲಿ ಹೆಂಗಳೆಯರ ನಡುವೆ ವಿನೋದ ಮಾಡುತ್ತಿದ್ದ ಕೃಷ್ಣನ ಬಗ್ಗೆ ತಿಳಿಸಿದ್ದಿರೋ  ಅಥವಾ ಮಂಜುಳವಾದ ಭಗವಧ್ಗೀತೆಯನ್ನು ತನ್ನ ಸಿಂಹ ಧ್ವನಿಯಿಂದ ವಾಚಿಸಿದ ಕೃಷ್ಣನ ಬಗ್ಗೆ ತಿಳಿಸಿದ್ದಿರೋ? ನೀವು  ಮೊದಲನೇ ಕೃಷ್ಣನ ಬಗ್ಗೆ ತಿಳಿಸಿದ್ದರೆ ಮೊದಲು ನಿಮ್ಮ ಮಗುವಿಗೆ ನಗಾರಿ,ಡಮರುಗದ ಸದ್ದನ್ನು ಕೇಳಿಸಿ.ಇಲ್ಲವಾದರೇ ಇಡೀ ದೇಶವೇ ಹೆಂಗಳೆಯರ ಬೀಡಾಗಿ ಹೋದೀತು".ಇಂತಹ ಕೆಚ್ಚಿನ ಸಿಂಹವಾಣಿ ಸ್ವಾಮೀಜಿಯವರದ್ದಾಗಿತ್ತು.ಇದೇ ಅಲ್ಲವೇ ಯುವಕರನ್ನು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಂದು ನಿಲ್ಲಿಸಿದ್ದು.   

                           ಸ್ವಾಮೀಜಿಯವರು ಉತ್ತರ ನೀಡದ ಸಮಸ್ಯೆಗಳೇ ಇರಲಿಲ್ಲ.ಸಮಾಜದ ಅಸಮಾನತೆಯಿಂದ ಮಹಿಳಾ ಸ್ವಾವಲಂಬನೆಯವರೆಗೂ ಸ್ವಾಮೀಜಿಯವರು ಸಲಹೆಯನ್ನು ನೀಡಿದ್ದಾರೆ.ಇಂದಿಗೂ ಸ್ವಾಮೀಜಿಯವರು ನೀಡಿದ ಉತ್ತರಗಳು ಪ್ರಸ್ತುತವೆನಿಸುತ್ತವೆ.ಸ್ವಾಮೀಜಿಯವರ ೧೫೦ನೇ ಜಯಂತಿಯ ಈ ಸಂದರ್ಭದಲ್ಲಿ ನಾವು ಅವರಿಗೆ ಸಲ್ಲಿಸುವ ಗೌರವದ ಕಾಣಿಕೆಯೆಂದರೆ ಅದು ಅವರ ಆದರ್ಶಗಳನ್ನು ಪಾಲಿಸುವುದು.ಸ್ವಾಮೀಜಿಯವರು ಹುಟ್ಟಿದ ಈ ದೇಶದ ಯುವಜನತೆ ತಪ್ಪು ದಾರಿ ಹಿಡಿಯುತ್ತದೆ,ಸಣ್ಣ ಕಾರಣಗಳಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತದೆ ಎಂದರೆ ನಾವು ಅವರ ಆದರ್ಶಗಳನ್ನು ಗಾಳಿಗೆ ತೂರಿದ್ದೇವೆ ಎಂದೇ ಅರ್ಥ.ಸ್ವಾಮೀಜಿಯವರ ಕನಸಿನ ಭಾರತ ನಿರ್ಮಾಣಮಾಡುವ ಜವಾಬ್ದಾರಿ ಯುವಕರ ಮೇಲಿದೆ.ಅದನ್ನರಿತು ನಾವು ಮುನ್ನಡೆಯಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ