10/1/12

ನಿತ್ಯ ರಮಣೀಯ ಆಗುಂಬೆ


ಶಿವಮೊಗ್ಗೆಯಲ್ಲಿ ಆಗಸ್ಟ್ ನಲ್ಲಿ ಸುರಿಯುವ ಮಳೆ ಉತ್ತರ ಕರ್ನಾಟಕದ ಈಡಿ ವರ್ಷದ ಮಳೆಗೆ ಸಮ ಎಂದರೆ ಉತ್ಪ್ರೇಕ್ಷೆ ಆಗಲಾರದು.ಅಂತಹ ಶಿವಮೊಗ್ಗದವನಾದ ನನಗೆ ಮಳೆಯೆಂದರೆ ಅಂತಹ ವಿಶೇಷವಾದ ಅಸಕ್ತಿಯೇನು ಇಲ್ಲ.ಆದರೆ ಅಂತಹುದೇ ಒಂದು ಆಗಸ್ಟ್ ನಲ್ಲಿ ಅದೇ ಮಳೆಯನ್ನು ದಿನಗಟ್ಟಲೇ ನೋಡಲು ಆಗುಂಬೆಯಲ್ಲಿ ಬಂದು ಕುಳಿತಿದ್ದೆ.ನನ್ನ ಅಜ್ಜನ ಮನೆ ಕುಂದಾಪುರದಲ್ಲಿ ಇದ್ದದ್ದರಿಂದ ಬೇಸಿಗೆಯಲ್ಲಿ ಸದಾ ನಾನು ಅಲ್ಲಿಗೆ ಹೋಗುತಿದ್ದೆ.ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹೋದರೆ ಕುಂದಾಪುರಕ್ಕೆ ಹೋಗಲು ಇದ್ದ ಎರಡು ಮಾರ್ಗಗಳಲ್ಲಿ ಆಗುಂಬೆ ಮಾರ್ಗವೂ ಒಂದು.ಕರ್ನಾಟಕದ ಚಿರಪೂಂಜಿ ಎಂದು ಖ್ಯಾತಿ ಪಡೆದಿದ್ದ ಆಗುಂಬೆ ಬೇಸಿಗೆ ಕಾಲವಾಗಿರುತ್ತಿದ್ದರಿಂದ ಬಿಸಿಲಿನಿಂದ ಕೂಡಿರುತಿತ್ತು.ಹಾಗಾಗಿ ಆಗುಂಬೆ ನನ್ನ ಕಣ್ಣಿಗೆ ವಿಶೇಷವಾಗಿ ಗೋಚರಿಸುತ್ತಿದ್ದದ್ದು ಕೇವಲ ಅದರ ಕಡಿದಾದ ತಿರುವುಗಳಿಂದ(ದೊಡ್ಡ ಬಸ್ ಹಾಗೂ ಲಾರಿಗಳು ಅಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ).ಆದರೆ ಅನಿರೀಕ್ಷಿತವಾಗಿ ಒಂದು ದಿನ  ಅಲ್ಲಿನ ಮಳೆಯನ್ನು ನೋಡುವ ಸೌಭಾಗ್ಯ ನನಗೆ ದೊರಕಿತ್ತು.ಯಾವುದೋ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಆಗುಂಬೆ ಮಾರ್ಗದಲ್ಲಿ ಕುಂದಾಪುರಕ್ಕೆ ಹೊರಟಿದ್ದೆವು.ಅದು ಜೂನ್ ತಿಂಗಳಾಗಿದ್ದರಿಂದ ತೀರ್ಥಹಳ್ಳಿಯಿಂದ ಮುಂದೆ ಸಂಪೂರ್ಣ ಮೋಡ ಮುಸುಕಿದ ವಾತಾವರಣವಿದ್ದಿತ್ತು.ಆಗುಂಬೆಯ ಸನಿಹಕ್ಕೆ ಬಂದ ಕೊಡಲೇ ಸುರಿಯತೊಡಗಿದ ಮುಸಲಧಾರೆ ರಸ್ತೆ ಕಾಣದಂತೆ ಮಾಡಿಹಾಕಿತ್ತು.ಡ್ರೈವರ್ ಕಾರನ್ನು ರಸ್ತೆ ಬದಿ ನಿಲ್ಲಿಸಿದರು.ಟೀ ಹೀರಲು ಅಲ್ಲೇ ಸನಿಹದಲ್ಲಿದ್ದ ಟೀ ಕಂ ಬೋಂಡ ಸೆಂಟರಿಗೆ ಹೋದೆವು(ಆಗುಂಬೆ ಘಾಟಿ ಪ್ರವೇಶಿಸುವ ಮೊದಲು ಸಿಗುವ ಚೆಕ್ ಪೋಸ್ಟ್ ನ ಸನಿಯದಲ್ಲಿರುವ ಈ ಪುಟ್ಟ ಅಂಗಡಿ ಬಹಳ ಪ್ರಸಿದ್ಧಿ ಪಡೆದಿದೆ).ಬೋಂಡ ತಿನ್ನುತ್ತ ನಾ ಕಂಡ ದೃಶ್ಯ ವೈಭವ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿತ್ತು.ಅಲ್ಲಿಯವರೆಗೂ ಆಗುಂಬೆಯ ಬಗ್ಗೆ ನನಗೆ ಇದ್ದ ಇಮೇಜ್ ಸಂಪೂರ್ಣ ಬದಲಾದ ದಿನ ಅದು.ನಮ್ಮ ಕೆ.ಕಲ್ಯಾಣ್,ಜಯಂತ್ ಕಾಯ್ಕಿಣಿಯಂತವರು ಅಲ್ಲಿ ಇದ್ದಿದ್ದರೆ ಸಾವಿರ ಕವನಗಳು ಸೃಷ್ಟಿಯಾಗಿ ಬಿಡುತಿತ್ತೇನೋ? ಕೈಯಲ್ಲಿ ಒಂದು ಕ್ಯಾಮೆರವೂ ಇಲ್ಲದಂತೆ ಹೋಗಿದ್ದ ನಾನು ಸುಮ್ಮನೆ ನೋಡುತ್ತಾ ಕುಳಿತಿದ್ದೆ.ನಿಧಾನವಾಗಿ ಮಳೆ ಕಡಿಮೆಯಾದ ನಂತರ ನಮ್ಮ ಕಾರು ಅಲ್ಲಿಂದ ಹೊರಟಿತ್ತು.ನಂತರ ನಮಗೆ ಎದುರಾದದ್ದು ಆಗುಂಬೆಯ ಘಾಟಿ.ಪ್ರತಿಯೊಬ್ಬ ಪ್ರಕೃತಿಪ್ರಿಯನು ಒಮ್ಮೆಯಾದರು ನೋಡಲೇಬೇಕಾದ ದೃಶ್ಯಗಳನ್ನ ಅದು ಕಟ್ಟಿಕೊಡುತ್ತದೆ.ಮಳೆಯಿಂದ ತೋಯ್ದು ಹೋಗಿದ್ದ ರಸ್ತೆ,ಮಳೆ ನೀರನ್ನು ಇನ್ನು ಜಿನುಗುತಿದ್ದ ಮರ-ಗಿಡಗಳು,ಸುತ್ತಲೂ ಇದ್ದ  ಹಚ್ಚಹಸಿರು ಕಣ್ಮನ ತಣಿಸುತಿತ್ತು.ಸ್ವಲ್ಪ ಬೆಟ್ಟದಿಂದ ಕಣ್ಣು ಕೆಳಗೆ ಹಾಯಿಸಿದರೆ ಕಾಣುವ ದೃಶ್ಯ ಸೊಬಗು ಇನ್ನೂ ಮನೋಹರ.ಮಳೆಯ ಕಾರಣ ಅದರ ಚೆಲುವು ಇಮ್ಮಡಿಸಿತ್ತು.ಹತ್ತಿರದಲ್ಲೇ ಹರಿಯುವ ಸೀತಾ ನದಿ ನಮಗೆ ಅಲ್ಲಿ ಕಾಣುತ್ತದೆ.ಘಟ್ಟ ಇಳಿಯುವಾಗ ಅಲ್ಲಲ್ಲಿ ಮಳೆಗಾಲದಲ್ಲಿ ಕಾಣಸಿಗುವ ಜಲಪಾತಗಳು ನಿಜಕ್ಕೂ ಕಣ್ಣಿಗಿಂಪು ನೀಡುತ್ತದೆ.ನನಗಂತೂ ಅಲ್ಲಿಂದ ಕಾಲ್ತೆಗೆಯುವ ಇಷ್ಟವೇ ಇರಲಿಲ್ಲ.ಆದರೆ ಅಲ್ಲಿಂದ ಹೊರಡಲೇ ಬೇಕಾಯಿತು.ಅದಾದ ನಂತರ ಹಲವಾರು ಬಾರಿ ಕೇವಲ ಮಳೆ ನೋಡಲೆಂದೇ ಅಲ್ಲಿಗೆ ಹೋಗಿದ್ದೇನೆ.ಹತ್ತಿರದಲ್ಲೇ ಇರುವ ಸೀತಾನದಿ ನಿಸರ್ಗಧಾಮಕ್ಕೂ ಹೋಗಿ ಬಂದಿದ್ದಿದೆ.ರಾಫ್ಟಿಂಗ್  ಮಾಡುವ ಹವ್ಯಾಸ ಇರುವವರು ಅಲ್ಲಿಗೆ ಹೋಗಲೇಬೇಕು.ಇದಲ್ಲದೇ ಆಗುಂಬೆಯ ಪ್ರಸಿದ್ಧಿಗೆ ಇನ್ನೂ ಅನೇಕ ಕಾರಣಗಳಿವೆ.ಆಗುಂಬೆ ನೋಡುವುದಕ್ಕೆ ಎಷ್ಟು ಸೊಬಗನ್ನು ಹೊಂದಿದೆಯೋ, ಅಷ್ಟೇ ಜೀವ ವೈವಿಧ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ.ಕಾಳಿಂಗ ಸರ್ಪದ ಪ್ರಾಕೃತಿಕ ವಾಸ ಸ್ಥಳ ಆಗುಂಬೆ.ಅನೇಕ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಪ್ರಾಣಿಗಳು ಇಲ್ಲಿ ನೋಡಸಿಗುತ್ತವೆ.ಹಾಗಾಗಿಯೇ ಅನೇಕ ಸಂಶೋಧನಾ ಕೇಂದ್ರಗಳು ಇಲ್ಲಿವೆ.ಅನೇಕ ಅಪರೂಪದ ಔಷಧೀಯ ಸಸ್ಯಗಳು ಇಲ್ಲಿ ಸಿಗುತ್ತವೆ.ಆಗುಂಬೆಯ ಇನ್ನೊಂದು ಹಿರಿಮೆ ಆಗುಂಬೆಯಲ್ಲಿ ಕಾಣುವ ಸುಂದರ ಸೂರ್ಯಾಸ್ತಮಾನ.ಸಂಜೆಯ ಆಗುಂಬೆಯ ಸುಂದರ ವಾತವರಣದಲ್ಲಿ ಕೆಂಬಣ್ಣದ ಸೂರ್ಯ ಅಸ್ತಮಾನವಾಗುವುದನ್ನು ನೋಡಲು ಎರಡು ಕಣ್ಣು ಸಾಲದು.ಇಲ್ಲಿಗೆ ಕ್ಯಾಮೆರ ಇಲ್ಲದೇ ಬರುವುದು ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆಯೇ ಸರಿ.
ಸರಿ ಇನ್ನೇನು ಮುಂದಿನ ಮಳೆಗಾಲದಲ್ಲಿ ಹೊರಡಿಆಗುಂಬೆಯ ಕಡೆಗೆ.ಮರೆಯದಿರಿ ಕ್ಯಾಮೆರಾದೊಂದಿಗೆ!










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ