8/1/12

ನಾವು ಸೋತ ಆ ಯುದ್ಧ!


ಹೌದು ನಾನು ಹೇಳಹೊರಟಿರುವುದು ೧೯೬೨ರ ಭಾರತ-ಚೀನಾ ಯುದ್ಧದ ಬಗ್ಗೆ.ಈ ವರ್ಷದ ಅಕ್ಟೋಬರ್ ಗೆ ಸರಿಯಾಗಿ ಈ ಯುದ್ಧಕ್ಕೆ ೫೦ ವರ್ಷ ತುಂಬುತ್ತದೆ.ನಮ್ಮ ಸೈನಿಕ ಹಿಮಾಲಯದ ಕೊರಕಲಿನಲ್ಲಿ ಚೀನಿ ಸೈನಿಕರ ಗುಂಡಿಗೆ,ಹಿಮಾಲಯದ ಹೆಪ್ಪು ಗಟ್ಟಿಸುವ ಚಳಿಗೆ ಸಿಲುಕಿ ನರಳುತ್ತ ಅನಾಥ ಹೆಣವಾಗಿ ಹೋಗಿ ೫೦ ವರ್ಷವಾಗುತ್ತದೆ.ಬದುಕಿ ಉಳಿದ ಸೈನಿಕರನ್ನು ಆ ಮಂಗೋಲಿಯನ್ ಮುಖದ ಸೈನಿಕರು ಸೆರೆಹಿಡಿದು ಯುದ್ಧ ಶಿಬಿರಗಳಲ್ಲಿ ಕೂರಿಸಿ ೫೦ ವರ್ಷ ಗಳಾಗುತ್ತದೆ.ಈ ಒಂದು ಯುದ್ಧವನ್ನು ಯಾವ ಭಾರತೀಯನೂ ಮರೆತಿರಲಾರ.ಏಕೆಂದರೆ ಇದೊಂದು ಯುದ್ಧವಲ್ಲ,ಭಾರತಕ್ಕೆ ಉಂಟಾದ ಅಪಮಾನ. ಈ ಯುದ್ಧದ ಸೋಲಿನ ಕಾರಣಗಳು ಇಂದಿನ ಯುವ ಪೀಳಿಗೆಗೆ ಅಷ್ಟಾಗಿ ತಿಳಿದಿರಲಿಕ್ಕಿಲ್ಲ.ಅದನ್ನು ತಿಳಿಸುವ ಪ್ರಯತ್ನವನ್ನು ಮಾಡಿದವರೂ ತೀರ ಕಡಿಮೆ.ಇಂದಿಗೂ ೧೯೬೨ರ ಯುದ್ಧ ನಮ್ಮ ಪಾಲಿಗೆ ದೊಡ್ಡ ರಹಸ್ಯವಾಗೆ ಉಳಿದಿದೆ.ಇದಕ್ಕೆ ಸಂಬಂಧ ಪಟ್ಟ ಅನೇಕ ದಾಖಲೆಗಳು ಕಣ್ಮರೆಯಾಗಿವೆ.ಏಕೆಂದರೆ ಅವುಗಳು ದೊರೆತರೆ ನಾವು ಮಹಾ ನೇತಾರರೆಂದು  ಕೊಂಡಿರುವ ಅನೇಕ ನಾಯಕರ ಬಣ್ಣ ಬಯಲಾಗುತ್ತದೆ!
                                                 ನಾನು ಮೊದಲ ಬಾರಿಗೆ ೧೯೬೨ರ ಯುದ್ಧದ ಬಗೆಗೆ ತಿಳಿದುಕೊಂಡಾಗ ತುಂಬಾ ಅವಮಾನಿತನಾಗಿದ್ದೆ.ಒಂದು ರೀತಿಯ ಅಸಹನೆ, ಸಿಟ್ಟು ನನ್ನಲ್ಲಿ ಮೂಡಿತ್ತು.ನಾವು ಚೀನಾದ ಮುಂದೆ ದಯನೀಯವಾಗಿ ತಲೆಬಾಗಿ ನಿಲ್ಲಲು ಕಾರಣವೇನು? ಅಷ್ಟು ದುರ್ಬಲವಾಗಿತ್ತೇ ನಮ್ಮ ಸೈನ್ಯ?ಅಷ್ಟೊಂದು ಹದಗೆಟ್ಟು ಹೋಗಿತ್ತೆ ನಮ್ಮ ರಕ್ಷಣಾ ವ್ಯವಸ್ಥೆ?ಯಾರನ್ನು ಇದಕ್ಕೆ ಹೊಣೆಯಾಗಿಸಬಹುದು?ಇಂತಹ ಅನೇಕ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು.ಈ ಪ್ರಶ್ನೆಗಳಿಗೆ ನಾನು ಕಂಡುಕೊಂಡ ಉತ್ತರಗಳನ್ನು ತಿಳಿಸುವ ಒಂದು ಚಿಕ್ಕ ಪ್ರಯತ್ನವೇ ಈ ಪುಟ್ಟ ಲೇಖನಗಳು.
                       ಕಾರ್ಗಿಲ್ ಯೋಧರ ಹೆಸರುಗಳನ್ನು ಪಟ್ಟಿಮಾಡಿ ಎಂದರೆ ಸಾಕು, ಅನುಜ್ ನಾಯರ್, ಯೋಗೇಂದ್ರ ಸಿಂಗ್ ಯಾದವ್, ವಿಕ್ರಂ ಬಾತ್ರ, ಮನೋಜ್ ಕುಮಾರ್ ಪಾಂಡೆ, ಹೀಗೆ ಅನೇಕ ಹೆಸರುಗಳು ನೆನಪಿಗೆ ಬರುತ್ತದೆ.ಆದರೆ ೧೯೬೨ರ ಯುದ್ಧ ವೀರರ ಬಗ್ಗೆ ಕೇಳಿದರೆ ನಮ್ಮಲ್ಲಿ ಮೌನ ಆವರಿಸುತ್ತದೆ.ಕಾರಣ ಇಷ್ಟೇ,ಕಾರ್ಗಿಲ್ ಯುದ್ಧವನ್ನು ನಾವು ಗೆದ್ದುಕೊಂಡಿದ್ದೆವು.ಆದರೆ ೧೯೬೨ರ ಆ ಯುದ್ಧ, ನಾವು ಸರ್ವಥಾ ನೆಲಕಚ್ಚಿದ ಯುದ್ಧ.ಹಾಗಾಗಿ ನಾವು ಆ ಯುದ್ಧದಲ್ಲಿ ಸೆಣಸಾಡಿದವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಆ ಸೋತ ಯುದ್ಧದಲ್ಲೂ ನಮ್ಮ ಸೈನಿಕನ ಶೌರ್ಯ-ಸಾಹಸಗಳಿಗೇನು ಕಡಿಮೆ ಇರಲಿಲ್ಲ.ಕಾರ್ಗಿಲ್ ಯುದ್ಧ ಸೆಣಸಿದ ಯೋಧನಿಗೆ ಎಲ್ಲವೂ ಇದ್ದವು.ಆದರೆ ಹಿಮಾಲಯದ ಮಂಜಿನಲ್ಲಿ ಕಾಲಿಗೆ ಬೂಟಿಲ್ಲದೆ,ಬೆಚ್ಚನೆಯ ಉಡುಪು ಇಲ್ಲದೆ,ಕೊನೆಗೆ ಅನ್ನವೂ ಇಲ್ಲದೆ ಸಾಯಬೇಕಾದ ಪರಿಸ್ಥಿತಿಯಲ್ಲಿದ್ದನು ಆ ಸೈನಿಕ.ಚೀನಿ ಸೈನಿಕ ಎಲ್ಲ ದಿಕ್ಕಿನಲ್ಲೂ ಮುತ್ತಿಗೆ ಹಾಕುತ್ತಿದ್ದರೆ,ಅವರೆಡೆಗೆ ಹಾರಿಸಲು ಬಂದೂಕಿನಲ್ಲಿ ಗುಂಡುಗಳಿಲ್ಲದೆ ಅಸಹಾಯಕನಾಗಿ ಕುಳಿತಿದ್ದ ನಮ್ಮ ಸೈನಿಕ.ಇಂತಹ ಸ್ಥಿತಿಯಲ್ಲಿತ್ತು ಭಾರತಿಯ ಸೇನೆ..ಈ ಸ್ಥಿತಿಗೆ ನಮ್ಮ ಸೇನೆಯನ್ನು ತಂದು ನಿಲ್ಲಿಸಿದ್ದವರು ಯಾರು?ಚೀನಾ ದೇಶದಂತಹ ಬಲಾಡ್ಯ ಕಾಲು ಕೆರೆದು ಯುದ್ಧಕ್ಕೆ ಕರೆಯುತ್ತಿದ್ದಾಗ ನಮ್ಮ ಸೇನೆಯನ್ನು ಈ ಮಟ್ಟದಲ್ಲಿ ಸಜ್ಜುಗೊಳಿಸಿದ ಆ ನೇತಾರ ಯಾರು? ಈ ಪ್ರಶ್ನೆಯ ನಿಜವಾದ ಉತ್ತರ ಅದೆಂದೋ ಇತಿಹಾಸದಲ್ಲಿ ಕಳೆದುಹೋಗಿದೆ.ಆದರೆ ಹೊಣೆಗಾರನಾಗಿದ್ದು,ಅವಮಾನಿತನಾಗಿದ್ದು ಮಾತ್ರ ಅಂದಿನ ನಮ್ಮ ಸೈನಿಕ.
                       ಯಾವುದೇ ಒಂದು ಯುದ್ಧ ಕೇವಲ ಸೈನಿಕರ ಬಲದ ಮೇಲೆ ನಿಂತಿರುವುದಿಲ್ಲ.ಎರಡು ದೇಶಗಳ ರಾಜಕೀಯ ಪರಿಸ್ಥಿತಿ,ಉಭಯ ದೇಶಗಳ ನಾಯಕರ ಮನಸ್ಥಿತಿಯ ಮೇಲೆ ಅದು ಅವಲಂಬಿತವಾಗಿರುತ್ತದೆ.ನಮ್ಮ ಸಿದ್ಧತೆಗಳು ಬಹು ಮುಖ್ಯ ಪಾತ್ರವಹಿಸುತ್ತದೆ.೧೯೬೨ರ ಯುದ್ಧದಲ್ಲಿ ಎರಡು ದೇಶಗಳ ಸಿದ್ಧತೆ ಹೇಗಿತ್ತು ಎಂಬುದರ ಬಗ್ಗೆ ಒಂದು ಸಣ್ಣ ವಿವರಣೆ ಅವಶ್ಯಕ ಎಂಬುದು ನನ್ನ ಅನಿಸಿಕೆ.ಹಾಗಾಗಿಯೇ  ಯುದ್ಧ ಸಿದ್ಧತೆಯ ಬಗ್ಗೆ ಒಂದಿಷ್ಟು ಹೇಳಲಿದ್ದೇನೆ.ಅದಕ್ಕೂ ಮೊದಲು ಯುದ್ಧ ಹಿನ್ನಲೆಯ ಕುರಿತು ಒಂದಿಷ್ಟು ಹೇಳುವುದಿದೆ.
ಯುದ್ಧದ ಹಿನ್ನೆಲೆ:
ಭಾರತ ಬ್ರಿಟೀಷ್ ಆಡಳಿತದಲ್ಲಿದ್ದಾಗಿನಿಂದ ಚೀನಾ ಟಿಬೆಟ್ ಮೇಲೆ ತನ್ನ ಹಿಡಿತ ಸಾಧಿಸಲು ಹವಣಿಸುತ್ತಿತ್ತು.ಇತಿಹಾಸವನ್ನೊಮ್ಮೆ ಗಮನಿಸಿದರೆ ಚೀನಾ ಅನೇಕ ಬಾರಿ ಟಿಬೆಟ್ ಮೇಲೆ ದಂಡೆತ್ತಿ ಹೋದದ್ದನ್ನು ಕಾಣಬಹುದು.ಅತ್ಯಂತ ಆಯಕಟ್ಟಿನ ಸ್ಥಳದಲ್ಲಿದ್ದ ಟಿಬೆಟ್ ಮೇಲೆ ಹಿಡಿತ ಸಾದಿಸುವುದು ಚೀನಾಗೆ ಅನಿವಾರ್ಯವಾಗಿತ್ತು.ಆದರೆ ಬ್ರಿಟೀಶ್ ಸರಕಾರ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.ಬ್ರಿಟೀಷರ ಮುಂದೆ ಬಾಲ ಬಿಚ್ಚಲಾಗದೆ,ಚೀನಾ ತೆಪ್ಪಗೆ ಇತ್ತು.ಬ್ರೀಟಿಷರಿಂದ ನಾವು ಸ್ವತಂತ್ರ ಪಡೆದ ಮರುದಿನದಿಂದಲೇ ಚೀನಾ ಟಿಬೆಟನ್ನು ಆಕ್ರಮಿಸಲು ತಂತ್ರಗಳನ್ನ ಹೆಣೆಯಲು ಶುರುವಿಟ್ಟುಕೊಂಡಿತು.ಅಂತಿಮವಾಗಿ ೧೯೫೦ ಅಕ್ಟೋಬರ್ ೭ ಚೀನಾ ಟಿಬೆಟನ್ನು ವಶಪಡಿಸಿಕೊಂಡಿತು.ಅನಾಮತ್ತಾಗಿ ಟಿಬೆಟ್ ಹತ್ತಿಕುಳಿತ ಚೀನಿಗಳಿಗೆ ಬಹುಸುಲಭವಾಗಿ ವಶವಾಗುವ ಸ್ಥಿತಿಯಲ್ಲಿತ್ತು ಭಾರತದ ಪೂರ್ವ ಗಡಿಭಾಗಗಳು.ಆದರೆ ತಕ್ಷಣಕ್ಕೆ ಯುದ್ಧಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ ಚೀನಾ.ಕೊರಿಯಾದಂತಹ ನೆರೆ ರಾಷ್ಟ್ರದೊಂದಿಗೆ ಯುದ್ಧಮಾಡುತ್ತಿದ್ದ ಚೀನಾ ಆರ್ಥಿಕವಾಗಿ ದುಸ್ಥಿತಿಯಲ್ಲಿತ್ತು.ಅಲ್ಲದೇ ವಿಶ್ವಮಟ್ಟದಲ್ಲಿ ಚೀನಾಗೆ ಭಾರತದ ಸಹಾಯ ಅಗತ್ಯವಾಗಿತ್ತು.ಅದ್ದರಿಂದ ಚೀನಾ ನಮ್ಮೊಂದಿಗೆ ಸ್ನೇಹವನ್ನು ಮುಂದುವರಿಸುವ ನಾಟಕವಾಡಿತ್ತು.
                                 ಇತ್ತ ಭಾರತದಲ್ಲಿ  ಚೀನಾ ,ಟಿಬೆಟ್ ಮೇಲೆ ಆಕ್ರಮಣ ಮಾಡಿದ್ದರ ಪರ-ವಿರೋಧ ಚರ್ಚೆಗಳು ಪ್ರಾರಂಭವಾದವು.ಕಮ್ಯುನಿಸ್ಟರು ಚೀನಾ ಧೋರಣೆಯನ್ನು ಬೆಂಬಲಿಸಿದರೆ,ಬಲ ಪಂಕ್ತೀಯರು ಇದನ್ನು ವಿರೋಧಿಸಿದ್ದರು.ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರು ಚೀನಾದೊಂದಿಗೆ ಯುದ್ಧ ನಡೆದೇ ಹೋಗಲಿ ಎಂದುಬಿಟ್ಟಿದ್ದರು.ಅವರು ಹೇಳಿದಂತೆ ನಡೆದಿದ್ದರೆ ನಮ್ಮ ಇತಿಹಾಸ ಬೇರೆಯೇ ಹಾಗಿಬಿಡುತಿತ್ತೇನೋ, ಆದರೆ ನಮ್ಮ ದುರ್ದೈವವೋ ಏನೋ  ಮಹಾನಾಯಕ,ದೇಶದ ಕಣ್ಮಣಿ,ತನ್ನನ್ನು ತಾನು ಮಹಾ ಶಾಂತಿದೂತ ಎಂದು ಭಾವಿಸಿದ್ದ ನೆಹರು ಇದಕ್ಕೆ ಆಸ್ಪದ ನೀಡಲಿಲ್ಲ.ಕೊನೆಗೆ ಸಣ್ಣವಿರೋಧವನ್ನೂ ತೋರಿಸದೆ ಭಾರತ ಸುಮ್ಮನಾಗಿಬಿಟ್ಟಿತ್ತು.ನಮ್ಮಂತಹ ನೆರೆ ರಾಷ್ಟ್ರವೇ ಸುಮ್ಮನಿದ್ದ ಮೇಲೆ ಟಿಬೆಟ್ ನ ಪಾಡು ಕೇಳುವವರೇ ಇಲ್ಲದಂತಾಗಿತ್ತು.ಚೀನಾ ಅನಾಯಾಸವಾಗಿ ನಮ್ಮ ಹೆಬ್ಬಾಗಿನಲ್ಲಿ ಬಂದು ಕುಳಿತಿತ್ತು.ಪಾಪದ ಟಿಬೆಟ್ ನೆಲದಲ್ಲಿ ಬಂದು ಕುಳಿತಿತ್ತು ಡ್ರಾಗನ್. 
ಚೀನಾ ಸಿದ್ಧತೆ:

ಟಿಬೆಟಿನಲ್ಲಿ ಚೀನಾ ಬಂದು ಕುಳಿತಿದ್ದ ಸಮಯದಲ್ಲಿ ಚೀನಾದ ಅರ್ಥಿಕ ಸ್ಥಿತಿ ಹದಗೆಟ್ಟಿತ್ತು.ಆದರೂ ಅಂತಹ ಸಂದರ್ಭದಲ್ಲಿಯೂ ಚೀನಾ ಸುಮ್ಮನೆ ಕೂಡಲಿಲ್ಲ.ಅದು ಮುಂದೆಂದೋ ತಾನು ಭಾರತದೊಟ್ಟಿಗೆ ಮಾಡಬೇಕಾದ ಯುದ್ದದ ಸಿದ್ಧತೆಗಳನ್ನ ಅಂದೇ ಮಾಡತೊಡಗಿತ್ತು.ಸುಸ್ಸಜ್ಜಿತವಾದ ರಸ್ತೆಗಳನ್ನ ತನ್ನ ಗಡಿಭಾಗಗಳಲ್ಲಿ ಹಾಕಿಕೊಂಡಿತು.ಟಿಬೆಟಿನಲ್ಲಿ ರೈಲು ಹಳಿಹಾಕುವ ಕೆಲಸ ಶುರುವಿಟ್ಟು ಕೊಂಡಿತು.ತನ್ನ ಸೇನೆಯನ್ನ ಗಡಿಯುದ್ದಕ್ಕೂ ನಿಯೋಜಿಸಿತು.ಆದರೂ ೧೯೫೪ರಲ್ಲಿ ಭಾರತದೊಟ್ಟಿಗೆ "ಪಂಚಶೀಲ" ಒಪ್ಪಂವನ್ನು ಮಾಡಿಕೊಂಡಿತು.ಆಗ ಶುರುವಾದದ್ದೇ ಹಿಂದಿ-ಚೀನಿ ಭಾಯಿ ಭಾಯಿ ಎಂಬ ನಾಟಕ.ಇಷ್ಟೆಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡ ಚೀನಾ ತಾನು ಅನಿವಾರ್ಯವಾಗಿ ಮಾಡಿಕೊಂಡ ಒಪ್ಪಂದವನ್ನು ಮುರಿಯಲು ಒಂದು ಸಣ್ಣ ಕಾರಣವನ್ನು ಹುಡುಕುತಿತ್ತು.೧೯೫೯ರಲ್ಲಿ ಆ ಕಾರಣವೂ ಸಿಕ್ಕಿಹೋಯಿತು.ಟಿಬೆಟಿನಿಂದ ಪರಾರಿಯಾಗಿ ಬಂದ ಟಿಬೆಟ್ ಧರ್ಮಗುರು ಅರ್ಥಾತ್ ದಲೈಲಾಮ ಭಾರತದಲ್ಲಿ ಆಶ್ರಯವನ್ನು ಪಡೆದುಕೊಂಡ.ಆಗಲೇ ಚೀನಾ ತನ್ನ ಭಾಯಿ ಭಾಯಿ ಮುಖವಾಡವನ್ನು ಕಳಚತೊಡಗಿತು.ಭಾರತದ ಗಡಿಯೊಳಗೆ ಅಲ್ಲಲ್ಲಿ ತನ್ನ ಸೈನಿಕರನ್ನು ನುಗ್ಗಿಸಿ ಧಾಂದಲೆ ಎಬ್ಬಿಸಿತು.ಅಸಲಿಗೆ ಭಾರತ ಚೀನಾದ ನಡುವೆ ಸರಿಯಾದ ಗಡಿಗಳೇ ಇರಲಿಲ್ಲ.ಬ್ರಿಟೀಷರು ನಮಗೆ ನೀಡಿದ  ಮ್ಯಾಪ್ ನ್ನು(ಮ್ಯಾಕ್ ಮೋಹನ್ ಲೈನ್ ಎಂಬ ಅಗೋಚರ ಗಡಿರೇಖೆ ಅನ್ವಯ )   ನಾವು ಹಿಡಿದು ಕೊತಿದ್ದರೆ, ಅತ್ತ ಚೀನಾ ಬೇರೆಯದೇ ಮ್ಯಾಪ್ ಬರೆಯುತ್ತ ಕುಳಿತಿತ್ತು.ತನ್ನ ಹಿಡಿಸೈನ್ಯವನ್ನೇ ನವೀಕರಿಸಿಕೊಂಡಿತ್ತು ಚೀನಾ.
ಭಾರತದ ಸಿದ್ಧತೆ: 
ಅತ್ತ ಚೀನಾ ಇಷ್ಟೆಲ್ಲಾ ಮಾಡುತ್ತಿದ್ದಾಗ ಭಾರತದ ಸರ್ಕಾರ ಏನು ಮಾಡುತಿತ್ತು ಗೊತ್ತೇ,ನಿದ್ದೆ.ತನ್ನ ಗಡಿಯಾಚೆಗೆ ಇಷ್ಟೆಲ್ಲಾ ನಡೆಯುತ್ತಿದ್ದಾಗ ಚೀನಾದ ಮೇಲೆ ಒಂದು ಸಣ್ಣ ಅನುಮಾನದ ಕಣ್ಣನ್ನೂ ನೆಡದೆ  ಸುಮ್ಮನೆ ಕುಳಿತಿತ್ತು ನಮ್ಮ ಸರಕಾರ.ಚೀನಾ ದೊಂದಿಗಿನ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಲಿಲ್ಲ.ಗಡಿಯ ಬಗ್ಗೆ ಇದ್ದ ಗೊಂದಲಗಳನ್ನು ನಿಭಾಯಿಸಿಕೊಳ್ಳಲಿಲ್ಲ.ಕೊನೆಗೆ ತನ್ನ ಸೇನೆಯನ್ನು ಚೀನಾದ ಮೇಲೆ ಯುದ್ಧ ಮಾಡಿ ಗೆಲ್ಲುವ  ಮಟ್ಟಿಗೆ ಅಲ್ಲದೆ ಹೋದರೂ,ಪ್ರತಿರೋಧ ಒಡ್ಡುವಷ್ಟರ ಮಟ್ಟಿಗೂ ಸನ್ನದ್ಧಗೊಳಿಸಲಿಲ್ಲ.ನೆಹರು ತನ್ನ ರಾಜಕೀಯ ಲಾಲಸೆಗಳನ್ನ ತೀರಿಸಿಕೊಳ್ಳುತ್ತ ಸಾಗಿದರು.ಬ್ರೀಟಿಷರ ಕಾಲದಲ್ಲಿ ಬಲಿಷ್ಠವಾಗಿದ್ದ ಭಾರತೀಯ ಸೇನೆಯನ್ನು ಅಧೋಗತಿಗೆ ತಂದು ನಿಲ್ಲಿಸಿದ್ದರು.ಯಾವುದೋ ಜಮಾನದ ಬಂದೂಕುಗಳನ್ನ ಹಿಡಿದು ಕುಳಿತಿತ್ತು ನಮ್ಮ ಸೇನೆ.ಚೀನಾ ಚಟುವಟಿಕೆಗಳನ್ನ ಕಂಡು ಸೇನೆಯ ಕೆಲವು ಉನ್ನತ ಅಧಿಕಾರಿಗಳು ನೆಹರುರನ್ನ ಎಚ್ಚರಿಸಿದರು.ಈ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ನೆಹರು ತೀರ ಬೇಜವಾಬ್ದಾರಿಯಾಗಿ ನಡೆದು ಕೊಂಡರು.ತಾವಾಯಿತು ತಮ್ಮ ಭಾಷಣಗಳಾಯಿತು ಎಂದು ಸುಮ್ಮನಿದ್ದು ಬಿಟ್ಟಿದ್ದರು.ಕೊನೆಗೆ ಅದಕ್ಕೆ ದೊಡ್ಡ ಬೆಲೆ ತೆರುವ ಕಾಲವೂ ಬಂದಿತ್ತು.
 ಯುದ್ಧರಂಗ:
ಅಲ್ಲಿಯವರೆಗೂ ಸುಮ್ಮನಿದ್ದ ಚೀನಾ,1959 ರಲ್ಲಿ ಭಾರತದ ೫೦೦೦೦ ಚದರ ಮೈಲಿಗಳನ್ನು ತನಗೆ ಬಿಟ್ಟುಕೊಡುವಂತೆ ಸ್ಪಷ್ಟವಾಗಿ ಕೇಳಿತ್ತು.ಇದು ದೇಶದೆಲ್ಲೆಡೆ ಕೋಲಾಹಲವನ್ನ ಹುಟ್ಟುಹಾಕಿತು.ಒತ್ತಡಕ್ಕೆ ಸಿಲುಕಿದ ನೆಹರು ಒಂದು ದೊಡ್ಡ ತಪ್ಪನ್ನು ಎಸಗಿಬಿಟ್ಟರು.ಅದೇ "ಫಾರ್ವರ್ಡ್ ಪಾಲಿಸಿ".ಗಡಿಯ ಅಂಚಿನ ಉದ್ದಗಲಕ್ಕೂ ತನ್ನ ಪೋಸ್ಟ್ ಗಳನ್ನ ಸ್ಥಾಪಿಸುವಂತೆ ಆದೇಶ ನೀಡಿದ್ದರು.ಅಂತಹ ಪೋಸ್ಟುಗಳನ್ನು ಸ್ಥಾಪಿಸುವಷ್ಟುಸೇನೆಯನ್ನು ಈ ಕೆಲಸಕ್ಕೆ ನಿಯೋಜಿಸಿರಲಿಲ್ಲ.ಸಣ್ಣ ಸಂಖ್ಯೆಯ ಭಾರತ ಸೇನೆಯ ೭ ನೆಯ ಬ್ರಿಗೇಡನ್ನು ಈ ಕೆಲಸಕ್ಕೆ ಅಚ್ಚಲಾಯಿತು.ಈ ರೀತಿ ತೆರೆಯಲಾದ ಪೋಸ್ಟುಗಳಲ್ಲಿ ಇದ್ದದ್ದು ಕೆಲವೇ ಕೆಲವು ಸೈನಿಕರು.ಏಕಕಾಲದಲ್ಲಿ ಚೀನಾ ತನ್ನ ಸೈನಿಕರನ್ನು ಎತ್ತರದ ಶಿಖರಗಳಿಂದ ಇಳಿಸಿದರೆ,ಈ ಪೋಸ್ಟುಗಳ ಕ್ಷಣ ಮಾತ್ರದಲ್ಲಿ ಅವರ ವಶವಾಗುತಿದ್ದವು.ಇಂತಹ ಅತ್ಯಂತ ಅವೈಜ್ಞಾನಿಕವಾದ ನಿರ್ಧಾರವನ್ನು ಕೈಗೊಂಡ ಭಾರತ ಸರ್ಕಾರ ೧೯೬೨ ಅಕ್ಟೋಬರ್ ನಲ್ಲಿ ತನ್ನ ಇಡೀ ಬ್ರಿಗೇಡ್ ನಾಶವಾಗಲು ಕಾರಣವಾಯಿತು.೧೯೬೨ ಅಕ್ಟೋಬರ್ ೮ ರಂದು ಶುರುವಾದ ಚೀನಿ ದಾಳಿಗೆ ಸಿಕ್ಕ ಆ ಬ್ರಿಗೇಡ್ ಕೆಲವೇ ದಿನಗಳಲ್ಲಿ ನಾಶವಾಯಿತು.೧೯೬೨ರಲ್ಲಿ ನಿಜವಾಗಲು ಭಾರತ ದೊಡ್ಡ ಪ್ರತಿರೋಧವನ್ನು ಒಡ್ಡಿದ್ದು ವಲೊಂಗ್ ಪ್ರಾಂತ್ಯದಲ್ಲಿ.ಅಕ್ಷರಶಃ ಚೀನಾ ಸೈನ್ಯವನ್ನ ಹಿಮ್ಮೆಟಿಸಿತು ಭಾರತ ಸೇನೆಯ ಕೆಲವು ತುಕಡಿಗಳು.ಇಂತಹ ಕೆಲವು ಪ್ರತಿರೋಧಗಳನ್ನು ಬಿಟ್ಟರೆ,ಭಾರತ ಈ ಯುದ್ಧವನ್ನ ಹೀನಾಯವಾಗಿ ಸೋತುಹೋಗಿತ್ತು.ಹಾಗೆಂದ ಮಾತ್ರಕ್ಕೆ ನಮ್ಮ ಸೈನಿಕರನ್ನ ಸೋಲಿಗೆ ಹೊಣೆಯನ್ನಾಗಿಸಬಹುದೇ ?ಖಂಡಿತ ಇಲ್ಲ.ಇದಕ್ಕೆ ಹೊಣೆಯನ್ನಾಗಿಸಬಹುದಾದ  ಏಕೈಕ ವ್ಯಕ್ತಿ ನೆಹರು.ಮೆನನ್ ನಂತಹ ತಲೆತಿರುಕ ವ್ಯಕ್ತಿಗೆ ದೇಶದ ರಕ್ಷಣೆಯ ಅಮೂಲ್ಯವಾದ ಜವಾಬ್ದಾರಿಯನ್ನು ಹೊರಿಸಿ ದೇಶವಿದೇಶಗಳಲ್ಲಿ ಭಾಷಣ ಬಿಗಿಯುತ್ತ ತಿರುಗಾಡಿದ ನೆಹರು ಇದಕ್ಕೆಲ್ಲ ಹೊಣೆ.ಫಾರ್ವರ್ಡ್ ಪಾಲಿಸಿ ಎಂಬ ತಿಕ್ಕಲು ಉಪಾಯವನ್ನು ಮೆನನ್ ಎಂಬ ಸಚಿವ ಸೇರಿದಂತೆ ಕೆಲವು ಸೇನಾ ನಾಯಕರ ಸಲಹೆಯ ಮೇರೆಗೆ ಹಿಂದುಮುಂದು ಯೋಚಿಸದೆ ಜಾರಿಗೆತಂದರು.ಧೋಲಾ ಪೋಸ್ಟ್ ಎಂಬ ಅತ್ಯಂತ ದುರ್ಗಮ ಹಾಗೂ ಶತ್ರು ಸೈನಿಕರಿಗೆ ಅನಾಯಾಸವಾಗಿ ದೊರಕುವ ಸ್ಥಳದಲ್ಲಿ ನಿಯೋಜಿಸಿದ ಸೇನೆಗೆ ಕನ್ನಡಕ,ಬೆಚ್ಚಗಿನ ಉಡುಪು ದೊರಕಿಸಲಿಲ್ಲ.ಕಡೇಪಕ್ಷ ಹಸಿವನ್ನು ನಿಗಿಸಿಕೊಳ್ಳಲು ಸಹ ಸರಿಯಾದ ವ್ಯವಸ್ಥೆ ಇರಲಿಲ್ಲ,ಹಾರಿಸಲು ಸರಿಯಾದ ಪ್ರಮಾಣದಲ್ಲಿ ಮದ್ದು-ಗುಂಡುಗಳಿರಲಿಲ್ಲ .ಈ ರೀತಿ ನಮ್ಮ ಸರ್ಕಾರ ನಡೆಸಿಕೊಂಡರೆ,ಅತ್ತ ಚೀನಾ ಯೋಧ ಎಲ್ಲವನ್ನು ಪಡೆದು ಬಂದು ಕುಳಿತಿದ್ದ.ಆದರೆ  ನಮ್ಮ ಸೈನಿಕನ ಧೈರ್ಯ ಸಾಹಸಗಳಿಗೆ ಆತನ ಹಸಿವು ಅಡ್ಡ ಬರಲೇ ಇಲ್ಲ.ಹಿಮಾಲಯದ ಕೊರೆಯುವ ಚಳಿಗೂ ಅದನ್ನ ಅಡಗಿಸುವ ಶಕ್ತಿ ಇರಲಿಲ್ಲ.ಆತ ತನ್ನ ಕಡೆಯ ಉಸಿರಿನ ವರೆಗೂ ಹೋರಾಟ ಮಾಡಿದ.ಸಾಧ್ಯವಾದಷ್ಟು ಚೀನಿ ಸೈನಿಕರನ್ನು ಕೊಂದು ಕೆಡವಿದ.ಅಂತಹ ಒಬ್ಬ ಸಾಹಸಿಯ ಕಥೆ ನಾನಿಲ್ಲಿ ಹೇಳಲೇ ಬೇಕಾಗಿದೆ.ಆತನ ಹೆಸರು ಸಿಪಾಯಿ ಜಸ್ವಂತ್ ಸಿಂಗ್.ಸೇಲಾ ಶಿಖರದಲ್ಲಿ ಕಾವಲು ಕಾಯುತಿದ್ದ ಈತ ಅದೆಂತಹ ಯುದ್ಧ ಸಂಘಟಿಸಿದನೆಂದರೆ ಈತನ ಪೋಸ್ಟಿಗೆ ಲಗ್ಗೆ ಹಾಕಿದ ಸುಮಾರು ೮೦ ಚೀನಿ ಸೈನಿಕರನ್ನು ಕೆಲವೇ ಜನರಿದ್ದ ತನ್ನ ತಂಡದೊಂದಿಗೆ ಎದುರಿಸಿದನು.ಕೊನೆಗೆ ಆತನ ಇಡೀ ತಂಡ ನಿರ್ನಾಮವಾಯಿತು.ಆದರೂ ಏಕಾಂಗಿಯಾಗಿ ನುಗ್ಗಿ ಬರುತ್ತಿದ್ದ ಚೀನಿ ಸೈನಿಕರನ್ನು ಬಲಿ ತೆಗೆದುಕೊಂಡನು.ಸುಮಾರು ೪೦ ಜನ ಚೀನಿಗಳನ್ನು ಒಬ್ಬಂಟಿಯಾಗಿ ಸಾಯಿಸಿದ ಆತ ಕೊನೆಗೆ ತೀವ್ರವಾದ ರಕ್ತಸ್ರಾವದಿಂದ ಕೊನೆಯುಸಿರೆಳೆದನು.ಆತನ ಶವ ದೊರಕಲಿಲ್ಲ.ಇಂದಿಗೂ ಆತ ಜೀವಂತವಾಗಿದ್ದಾನೆ ಎಂದು ಭಾವಿಸುವ ನಮ್ಮ ಸೈನಿಕರು ಅವನಿಗಾಗಿ ಅಲ್ಲಿ ರಾತ್ರಿ ಮಲಗಲು ಮಂಚವನ್ನು ಸಿದ್ದಪಡಿಸುತ್ತಾರೆ.ಹಾಗೂ ಆತನಿಗಾಗಿ ಊಟ ಬಡಿಸುತ್ತಾರೆ.ಈಗಲೂ ಆತನ ಹೆಸರ ಹಿಂದೆ ದಿವಂಗತ ಎಂಬುದನ್ನು ಸೇರಿಸುವುದಿಲ್ಲ.ಅಲ್ಲಿನ ಸ್ಥಳೀಯರು ಆತನನ್ನು "ಕ್ಯಾಪ್ಟನ್ ಸಾಹಿಬ್" ಎಂದು ಕರೆಯುತ್ತಾರೆ.ಇಂತಹ ಅನೇಕ ಸಾಹಸ ಗಾಥೆಗಳು ನಮ್ಮ ಮುಂದೆ ಇವೆ.ಆದರೆ ಒಂದು ಸರ್ಕಾರದ ದೊಡ್ಡ ಅಜಾಗರೂಕತೆಯಿಂದ ಸೋತ ಯುದ್ಧ,ಇಂತಹ ಅನೇಕರ ಸಾಹಸಗಳು ನಮ್ಮ ಗಣನೆಗೆ ಬಾರದಂತೆ ತಡೆಯಿತು.ಒಬ್ಬ ಸೈನಿಕನಿಗೆ ನ್ಯಾಯವಾಗಿ ದೊರಕಬೇಕಾದ ಸಾವು ದೊರಕಲಿಲ್ಲ ಆ ನಮ್ಮ ಸೈನಿಕರಿಗೆ.ಎದುರಾಳಿಗಳ ಗುಂಡಿಗೆ ಬಲಿಯಾದರೆ ಅದು ಒಬ್ಬ ಸೈನಿಕನಿಗೆ ಗೌರವ ತರುವಂತಹದ್ದು.ಆದರೆ ನಮ್ಮ ಸೈನಿಕ ಹೆಚ್ಚಾಗಿ ಸತ್ತದ್ದು ಹಸಿವಿಗೆ ಹಾಗೂ ಭಯಾನಕ ಚಳಿಗೆ.ಈ ಯುದ್ಧದಲ್ಲಿ ೭ ನೇ ಬ್ರಿಗೇಡ್ ನ ಪಾತ್ರ ತುಂಬಾ ದೊಡ್ಡದು.ನಮ್ಮ ನಾಯಕರ ಕೆಟ್ಟ ತೀರ್ಮಾನಗಳ ನೇರ ಪರಿಣಾಮ ಆದದ್ದು ಇದೇ ಬ್ರಿಗೇಡ್ ನ ಮೇಲೆ.ಈ ಬ್ರಿಗೇಡ್ ನ ಅಂದಿನ ಬ್ರಿಗೇಡಿಯರ್ ದಿ||ಜಾನ್.ಪಿ.ದಳವಿ ೧೯೬೨ರಲ್ಲಿ ಅವರ ಬ್ರಿಗೇಡ್ ನ ಮೇಲೆ ಆದ ಎಲ್ಲ ದಾಳಿಗಳನ್ನು ಅವರ ಪುಸ್ತಕ "ದಿ ಹಿಮಾಲಯನ್ ಬ್ಲಂಡರ್" ನಲ್ಲಿ ಸಮಗ್ರವಾಗಿ ವಿವರಿಸುತ್ತಾರೆ.ಅವರನ್ನು ಸೇರಿದಂತೆ ಅವರ ಬ್ರಿಗೇಡ್ ನ ಅನೇಕ ಅಧಿಕಾರಿಗಳು ಚೀನಾದ ಯುದ್ದ ಕೈದಿಗಳಾಗಿದ್ದರು.ಅವರು ಹೇಳುವಂತೆ ಅವರ  ಬ್ರಿಗೇಡ್ ಗೆ ವಹಿಸಿದ ಕೆಲಸ ನಮ್ಕಾಚು ನದಿಗೆ ಅಡ್ಡಲಾಗಿ ಕಟ್ಟಿದ್ದ ೫ ಸೇತುವೆ ಗಳನ್ನು ಕಾಯುವುದು(ಅಸಲಿಗೆ ಅವ್ಯಾವು ಸೇತುವೆಗಳೇ ಅಲ್ಲ ಎಂದು ಆತ ಹೇಳುತ್ತಾರೆ). ಅದಕ್ಕೆ ನಿಯೋಜನೆಗೊಂಡಿದ್ದ ಸೈನಿಕರು ೫೪೩.ಅದರಲ್ಲಿ ಯುದ್ಧದಿಂದ ಹುತಾತ್ಮರಾದವರು ೨೮೨ ಸೈನಿಕರು.೮೧ ಸೈನಿಕರು ಗಾಯಗೊಂಡು ಬಂಧಿತರಾದರೆ,ಗಾಯಗೊಳ್ಳದೇ ೯೦ ಸೈನಿಕರು ಬಂಧಿತರಾದರು.ಯಾವುದೇ ಅಪಾಯವಿಲ್ಲದೆ ಮನೆಗೆ ಸೇರಿದವರು ೬೦ ಸೈನಿಕರು ಮಾತ್ರ.ಇದಕ್ಕಿಂತ ಪ್ರಾಮಾಣಿಕವಾಗಿ ಒಂದು ತುಕಡಿ ಯುದ್ಧಮಾಡಲು ಸಾಧ್ಯವೇ? ಅದೂ ನೆಹರು ಸರ್ಕಾರ ಒದಗಿಸಿದ ಸವಲತ್ತುಗಳನ್ನು ಇಟ್ಟುಕೊಂಡು?ತವಾಂಗ್ ಚೀನಾದ ವಶವಾಗುವುದರೊಂದಿಗೆ ಚೀನಾ ತನ್ನದೆಂದು ವಾದಿಸಿದ ನೆಲ ಅದರದ್ದಾಗಿತ್ತು.ಆದರೂ ಮುಂದುವರೆದ ಚೀನಾ ಬ್ರಹ್ಮಪುತ್ರಕೊಳ್ಳದವರೆಗೂ ಬಂದುಬಿಟ್ಟಿತು.ಅಂತಿಮವಾಗಿ ಅಮೆರಿಕಾದ ಮಧ್ಯಪ್ರವೇಶದೊಂದಿಗೆ ಯುದ್ಧ ಅಂತ್ಯವಾಗಿ ಚೀನಾ ನಮ್ಮನೆಲ ಬಿಟ್ಟು ಹೊರಟುಹೋಯಿತು (ಚೀನಾ ತನ್ನದಲ್ಲ ಎಂದು ಭಾವಿಸಿದ್ದ ನೆಲವನ್ನು ಮಾತ್ರ).
ಕೊನೆಗೆ:
ಭೌಗೋಳಿಕವಾಗಿ ನೋಡಿದರೆ ಟಿಬೆಟ್ ವಶಪಡಿಸಿಕೊಂಡಿದ್ದ ಚೀನಾ ಈ ಯುದ್ಧದಲ್ಲಿ ಸಹಜವಾಗಿ ಮೇಲುಗೈ ಹೊಂದಿತ್ತು.ಟಿಬೆಟ್ನಲ್ಲಿ ಚೀನಿ ಸೈನಿಕ ಬೆಚ್ಚಗೆ ಬಂಕರ್ ನಲ್ಲಿ ಕುಳಿತು ಸಮಯ ನೋಡಿ ಸರಸರನೆ ತನ್ನ ಶಸ್ತ್ರಾಸ್ತ್ರದೊಂದಿಗೆ ಇಳಿದು ಬಂದು ನಮ್ಮ ಸೈನಿಕನೊಂದಿಗೆ ಯುದ್ಧಕ್ಕೆ ಇಳಿಯುತ್ತಾನೆ.ಆದರೆ ಭಾರತದ ಯೋಧರಿಗೆ ಅಂತಹ ಯಾವುದೇ ತಲೆ ಮರೆಸಿಕೊಳ್ಳುವ ಸ್ಥಳಗಳಿಲ್ಲ.ಅಲ್ಲದೇ ಭಾರತ ಕಡೆಯಿಂದ ಕದನ ನಡೆದ ಜಾಗಗಳಿಗೆ ಅಗತ್ಯ ಸಲಕರಣೆಗಳನ್ನ ಸಾಗಿಸುವುದು ಬಲುಕಷ್ಟ.ಹಾಗಾಗಿ ಹೆಚ್ಚಿನ ಸೈನ್ಯ  ನಿಯೋಜಿಸುವುದು ಭಾರತಕ್ಕೆ ಸಾಧ್ಯವಾಗಿರಲಿಲ್ಲ.ಈ ಒಂದು ವ್ಯತ್ಯಾಸವೇ ಭಾರತವನ್ನ ಅರ್ಧ ಸೋಲಿಸಿತ್ತು.ಇನ್ನುಮುಂದೆ ಎಂದೇ ಯುದ್ಧ ನಡೆದರೂ ಈ ಒಂದು ಮುನ್ನಡೆಯನ್ನ ಚೀನಿ ದುಶ್ಮನ್ ಹೊಂದಿರುತ್ತಾನೆ.ಒಟ್ಟಾರೆ ಹೇಳುವುದಾದರೆ ಟಿಬೆಟ್ ನಲ್ಲಿ ಚೀನಾ ತಳವೂರುವುದನ್ನು ಭಾರತ ವಿರೋಧಿಸದೆ ಇದ್ದದ್ದು ಭಾರಿ ಅನಾಹುತಗಳಿಗೆ ಎಡೆಮಾಡಿಕೊಟ್ಟಿತ್ತು.ಅಲ್ಲದೇ ಭಾರತದ ನಾಯಕರು ಶತಮಾನಗಳಿಂದ ಅನುಸರಿಸಿರುವ ಅಸಡ್ಡೆ ಮನೋಭಾವ ನಮ್ಮನ್ನು ಇತರರಿಗಿಂತ ಹಿಂದೆ ಬೀಳುವಂತೆ ಮಾಡಿದೆ.ದೂರದೃಷ್ಟಿ ನಾಯಕರಿಗೆ ಇರಲೇಬೇಕಾದ ಗುಣ.ಆದರೆ ನಮ್ಮನ್ನಾಳಿದ ಅನೇಕ ನಾಯಕರಿಗೆ ಈ ಗುಣ  ಇರಲೇ ಇಲ್ಲ. ಶತಮಾನಗಳಿಂದ ಅನ್ಯರ ಆಡಳಿತದಲ್ಲಿದ್ದ ನಾವು ಸ್ವತಂತ್ರ ಬಂದ ಕೂಡಲೇ ಮತ್ತೆ ಇತರರು ನಮ್ಮ ಮೇಲೆ ಕಣ್ಣು ಹಾಯಿಸದಂತೆ ಬಲಿಷ್ಠ ಸೇನೆ ಕಟ್ಟಬೇಕು ಎಂದು ಅನ್ನಿಸಲೇ ಇಲ್ಲ.ಶಾಂತಿ ಮಂತ್ರ ಎಂಬುದು ಬಳಸಬಾರದ ಕಡೆಯಲ್ಲೆಲ್ಲಾ ಬಳಕೆಯಾಗಿತ್ತು.ಅದರಲ್ಲೂ ನೆಹರು ಸರ್ಕಾರ ತನ್ನ ರಾಜಕೀಯ ನೀತಿಗಳನ್ನ ಸೇನೆಯ ಮೇಲೂ ಹೇರಿದ್ದರು.ಅಂತಿಮವಾಗಿ ಹೇಳುವುದಾದರೆ  ನಮ್ಮ ಪ್ರಜೆಗಳು ಸಹ  ಈ ವಿಚಾರದಲ್ಲಿ ಹೊಣೆಗಾರರಾಗುತ್ತಾರೆ. ಏಕೆಂದರೆ ಸೇನೆ ಎದುರಿಸುತ್ತಿದ್ದ ಸಮಸ್ಯೆಗಳ ಕುರಿತು ಯಾರು ಪ್ರತಿಭಟಿಸಲಿಲ್ಲ.ಹಾಗೊಂದು ವೇಳೆ ಪ್ರತಿಭಟಿಸಿದ್ದರೆ,ಒಂದಷ್ಟು ಸೌಕರ್ಯ ಸೇನೆಗೆ ಲಭಿಸಿರುತಿತ್ತು .ಒಟ್ಟಾರೆಯಾಗಿ ೧೯೬೨ರ ಯುದ್ಧ ನಮಗೊಂದು ದೊಡ್ಡ  ಪಾಠ ಕಲಿಸುತ್ತದೆ, ನಾವು ಕಲಿಯುವುದಿದ್ದರೆ!
                            ಇಂಡೋ-ಚೀನಾ ಯುದ್ಧದ ವೀರ ಯೋಧರಿಗೊಂದು ಶ್ರದ್ಧಾಂಜಲಿ ಹೇಳುತ್ತಾ ಈ ಒಂದು ಲೇಖನವನ್ನು  ಅಂತ್ಯಗೊಳಿಸುತ್ತೇನೆ.

 ಅಭಿನಂದನೆ: "ದಿ ಹಿಮಾಲಯನ್ ಬ್ಲಂಡರ್" ಕೃತಿಯನ್ನು ತಮ್ಮ ಸೊಗಸಾದ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಟ್ಟಿರುವ ರವಿ ಬೆಳಗೆರೆ ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಹೆಚ್ಚಿನ ಓದಿಗೆ: 
"ದಿ ಹಿಮಾಲಯನ್ ಬ್ಲಂಡರ್" ಮೂಲ ಬ್ರಿಗೇಡಿಯರ್ ಜಾನ್.ಪಿ.ದಳವಿ ಕನ್ನಡಕ್ಕೆ ಅನುವಾದ ರವಿ ಬೆಳಗೆರೆ.
click here to study more
ಬ್ರಿಗೇಡಿಯರ್ ಜಾನ್.ಪಿ.ದಳವಿ






                           





3 ಕಾಮೆಂಟ್‌ಗಳು:

  1. Thanks for the information and hand of the Indian army soldiers. I request friends please read this message and inform the all Indian person.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಈ ಲೇಕನ ಪ್ರತಿಯೊಬ್ಬ ಭಾರತಿಯರು ಓದುವಂತಹದಾಗಿದೆ ನಾನು ಈ ನಿಮ್ಮ ಲೇಕನವನ್ನು ನನ್ನ ಕೈಲಾದಷ್ಟು ಜನರಿಗೆ ಮುಟ್ಟಿಸುವಲ್ಲಿ ಸಹಾಯ ಮಾಡುತ್ತೇನೆ.......<3 ಜೈ ಹಿಂದ್

    ಪ್ರತ್ಯುತ್ತರಅಳಿಸಿ