ಅವಶ್ಯಕವಿದ್ದಾಗಲೆಲ್ಲ ನಮ್ಮ ಖಾತೆಯಿಂದ ಹಣ ತೆಗೆದುಕೊಳ್ಳಲು ಡೆಬಿಟ್ ಕಾರ್ಡ್ ಬಳಸಿಕೊಳ್ಳುತ್ತೇವೆ.ಇತ್ತೀಚೆಗಂತೂ ಸಾಮಾನ್ಯ ಜನರ ಕೈಯಲ್ಲೂ ಇದು ಕಾಣಸಿಗುತ್ತದೆ.ಅಷ್ಟೇ ಉಪಯೋಗಕಾರಿಯಾದ ಇನ್ನೊಂದು ಕಾರ್ಡ್ ಎಂದರೆ ಅದು ಕ್ರೆಡಿಟ್ ಕಾರ್ಡ್.ಡೆಬಿಟ್ ಕಾರ್ಡ್ ಬಳಸುವಷ್ಟು ಜನ ಕ್ರೆಡಿಟ್ ಕಾರ್ಡನ್ನು ಬಳಸುವುದಿಲ್ಲ.ಆದರೂ ಇತ್ತೀಚೆಗೆ ಕ್ರೆಡಿಟ್ ಕಾರ್ಡಿನ ಬಳಕೆ ಹೆಚ್ಚುತ್ತಿದೆ.ಜೇಬಿನಲ್ಲಿ ಹಣದ ಬದಲು ಕ್ರೆಡಿಟ್ ಕಾರ್ಡ್ ಒಯ್ಯುವ ಹೊಸ ಪ್ಯಾಶನ್ ಶುರುವಾಗಿಬಿಟ್ಟಿದೆ.ಕ್ರೆಡಿಟ್ ಕಾರ್ಡಿನ ಇನ್ನೊಂದು ವಿಶೇಷ ಎಂದರೆ ನಿಮ್ಮ ಜೇಬಿನಲ್ಲಿ ಮಾತ್ರವಲ್ಲ ನಿಮ್ಮ ಬ್ಯಾಂಕ್ ಖಾತೆಯಲ್ಲೂ ಹಣವಿರುವ ಅವಶ್ಯಕತೆ ಇಲ್ಲ.ಬೇಕಾದ್ದನ್ನು ಕೊಂಡುಕೊಳ್ಳಿ,ತಿಂಗಳ ಕೊನೆಯಲ್ಲಿ ಹಣ ಕೊಡಿ ಎಂಬ ಸ್ಕೀಮ್ ಗಳಿವೆ.ಹಾಗಾಗಿ ತಿಂಗಳು ಪೂರ್ತಿ ಅವಶ್ಯಕ ವಸ್ತುಗಳನ್ನೂ ಖರೀದಿಸಿ ತಿಂಗಳ ಕೊನೆಗೆ ಹಣಪಾವತಿಸಬಹುದು(ಆದರೆ ತುಸು ಬಡ್ಡಿಯೊಂದಿಗೆ).
ಆನ್ ಲೈನ್ ವ್ಯವಹಾರದಲ್ಲಿ ಸಹ ಕ್ರೆಡಿಟ್ ಕಾರ್ಡ್ ಬಳಕೆಯಾಗುತ್ತದೆ.ನಮ್ಮ ಕ್ರೆಡಿಟ್ ಕಾರ್ಡಿನ ನಂಬರ್,ಪಡೆದವರ ವಿವರ,ಹಾಗು ಇತರ ಕೆಲವು ವಿವರಗಳನ್ನು ನಾವು ಅಲ್ಲಿ ನಮೂದಿಸಬೇಕಾಗುತ್ತದೆ.ನಮ್ಮ ಕ್ರೆಡಿಟ್ ಕಾರ್ಡ್ ವ್ಯಾಲಿಡ್ ಆಗಿದ್ದರೆ,ನಮ್ಮ ಇತರ ವಿವರಗಳು ಸರಿಯಾಗಿದ್ದರೆ ನಮ್ಮ ಕೆಲಸ ಆಗುತ್ತದೆ.ಇಲ್ಲದಿದ್ದರೆ ನಮ್ಮ ಕ್ರೆಡಿಟ್ ಕಾರ್ಡ್ ಇನ್ ವ್ಯಾಲಿಡ್ ಎಂಬ ಸಂದೇಶ ಕಾಣಸಿಗುತ್ತದೆ.
ಹಾಗಿದ್ದರೆ ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ ಎಂದರೆ ಏನು?ಅದನ್ನು ಹೇಗೆ ತಿಳಿದುಕೊಳ್ಳುತ್ತಾರೆ?
ಈ ಪ್ರಶ್ನೆಗಳಿಗೆ ನಂತರ ಬರೋಣ.ಅದಕ್ಕಿಂತ ಮೊದಲು ಕ್ರೆಡಿಟ್ ಕಾರ್ಡ್ ನ ನಂಬರ್ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಕ್ರೆಡಿಟ್ ಕಾರ್ಡನ್ನು ನಿಡುವ ಅನೇಕ ಕಂಪೆನಿಗಳಿವೆ.ಉದಾಹರಣೆಯ ಸಲುವಾಗಿ ವೀಸಾ ಕಾರ್ಡಿನ ಚಿತ್ರಹಾಕಲಾಗಿದೆ. ಕ್ರೆಡಿಟ್ ಕಾರ್ಡಿನ ಮೇಲೆ ಒಟ್ಟು ೧೬ ನಂಬರ್ ಗಳಿರುತ್ತದೆ (ಕೆಲವೊಮ್ಮೆ ೧೫ ಇರುತ್ತದೆ) .ಮೊದಲ ಆರು ಕಾರ್ಡ್ ವಿತರಕರನ್ನು ಸೂಚಿಸುತ್ತದೆ.ಕಾರ್ಡ್ ಮೇಲೆ ಇರುವಂತೆ 455272 ವೀಸಾ ಕಾರ್ಡ್ ಎಂಬುದನ್ನು ಸೂಚಿಸುತ್ತದೆ.ಕೊನೆಯ ನಂಬರ್,ಅಂದರೆ 8.ಅದು "ಚೆಕ್ ಡಿಜಿಟ್".ಅದನ್ನು ಕೆಲವು ನಿಯಮಾನುಸಾರ ಹಾಕಲಾಗಿರುತ್ತದೆ.ಆ ನಿಯಮವನ್ನೇ ನಾವು ತಿಳಿಯಬೇಕಾಗಿರುವುದು.ಮೊದಲ ೬ ಡಿಜಿಟ್ ಹಾಗೂ ಕೊನೆಯ ಒಂದು ಡಿಜಿಟನ್ನು ಬಿಟ್ಟರೆ ಉಳಿಯುವುದು ಒಂಬತ್ತು ಡಿಜಿಟ್ ಗಳು ಅಕೌಂಟ್ ನಂಬರ್ ಅನ್ನು ಸೂಚಿಸುತ್ತದೆ(೧೫ ನಂಬರ್ ಇರುವ ಕಾರ್ಡಿನಲ್ಲಿ ೮ ಡಿಜಿಟ್ ಅಕೌಂಟ್ ನಂಬರ್ ಇರುತ್ತದೆ).೦ ಇಂದ ೯ ರ ವರೆಗಿನ ಅಂಕೆಯನ್ನು ಬೇರೆ ಬೇರೆ ಕಾಂಬಿನೇಶನ್ ಗಳಲ್ಲಿ ಜೋಡಿಸಿರಲಾಗಿರುತ್ತದೆ.ಇದೇ ರೀತಿ ಒಟ್ಟು ೧೦ರ ಘಾತ ೯ ರಷ್ಟು ಬೇರೆ ಬೇರೆ ಅಕೌಂಟ್ ನಂಬರ್ ಗಳಿಗೆ ಒಬ್ಬ ವಿತರಕ ಕಾರ್ಡ್ ವಿತರಿಸಬಹುದು.
ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ:
ಕ್ರೆಡಿಟ್ ಕಾರ್ಡ್ ಉಪಯೋಗಗಳು ಎಷ್ಟಿವೆಯೋ ಅಷ್ಟೇ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಜನರಿದ್ದಾರೆ.ನಾನು ಮೊದಲೇ ಹೇಳಿದಂತೆ ಆನ್ ಲೈನ್ ನಲ್ಲಿ ವ್ಯವಹರಿಸುವಾಗ ಕ್ರೆಡಿಟ್ ಕಾರ್ಡ್ ನ ನಂಬರ್ ನಮೂದಿಸುವ ಸ್ಥಳದಲ್ಲಿ ತೋಚಿದ ಸಂಖ್ಯೆಯನ್ನು ಬರೆದು ಹಾಕುತ್ತಾರೆ.ಪರಿಶೀಲಿಸಿದ ನಂತರ ಆ ನಂಬರಿನ ಕಾರ್ಡ್ ಅಸ್ತಿತ್ವದಲ್ಲಿ ಇಲ್ಲ ಎಂಬುದು ತಿಳಿದು ಬರುತ್ತದೆ.ಆದರೆ ಅನಾವಶ್ಯಕವಾಗಿ ಆನ್ ಲೈನ್ ಕಂಪನಿಗಳಿಗೆ ಸಮಯ ಹಾಗೂ ಹಣ ವ್ಯಯವಾಗಿರುತ್ತದೆ.ಇದನ್ನು ತಡೆಗಟ್ಟಲು ಕಾರ್ಡ್ ವಿತರಕರು ಕೆಲವೊಂದು ನಿಯಮಗಳನ್ನು ಅನುಸರಿಸಿ ಕಾರ್ಡಿನ ಕೊನೆಯ ಸಂಖ್ಯೆಯನ್ನು ನೀಡುತ್ತಾರೆ.ಆ ನಿಯಮದ ಅನ್ವಯ ಪ್ರೋಗ್ರಾಮ್ ಗಳನ್ನು ಮಾಡಿ ನಿಯಮದ ಅನ್ವಯ ಇರದ ನಂಬರ್ ಅನ್ನು ಕೂಡಲೇ ಕಂಡುಹಿಡಿಯ ಬಹುದು.ಇಂತಹ ಅನೇಕ ನಿಯಮಗಳನ್ನು ಕಾರ್ಡ್ ವಿತರಕರು ಅಳವಡಿಸಿ ಕೊಂಡಿರುತ್ತಾರೆ.ಇದರಿಂದ ಆನ್ ಲೈನ್ ಕಂಪನಿಗಳು ನಿರಾಳವಾಗಿರಬಹುದು.ಬಹಳಷ್ಟು ವಿತರಕರು ಬಳಸುವ ಅಂತಹ ಒಂದು ನಿಯಮವೆಂದರೆ ಮಾಡ್ ೧೦ ಚೆಕ್ಕಿಂಗ್ ನಿಯಮ.
ಲುಹ್ನ್ ಅಥವಾ ಮಾಡ್ ೧೦ ಚೆಕ್ಕಿಂಗ್ ನಿಯಮ:
೧೯೫೪ರಲ್ಲಿ IBM ಕಂಪನಿಯ ಹಂಸ್ ಲುಹ್ನ್ (hans luhn ) ಮಂಡಿಸಿದ ಒಂದು ನಿಯಮವೇ ಮಾಡ್ ೧೦ ಚೆಕ್ಕಿಂಗ್ ನಿಯಮ.ಇದರ ಅನ್ವಯವೇ ಬಹಳಷ್ಟು ಕಂಪನಿಗಳು ಕಾರ್ಡ್ ನಂಬರ್ ನೀಡುತ್ತವೆ.ಈ ನಿಯಮವನ್ನೇ ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ ಕಂಡು ಹಿಡಿಯಲು ಬಳಸಲಾಗುತ್ತದೆ.
ವಿವರಣೆ:
೧) ಮೊದಲಿಗೆ ಚೆಕ್ ಡಿಜಿಟ್ ನ ಹಿಂದಿನ ಅಂಕೆಯನ್ನು ದ್ವಿಗುಣಗೊಳಿಸಬೇಕು.ಈ ರೀತಿ ಮಾಡಿದ ನಂತರ ಬಂದ ಉತ್ತರವು ಹತ್ತು ಹಾಗೂ ಅದಕ್ಕಿಂತ ಹೆಚ್ಚಿದ್ದರೆ,ಆ ಸಂಖ್ಯೆಯ ಎರಡೂ ಡಿಜಿಟ್ ನ್ನು ಕೂಡಿ ಬಂದ ಉತ್ತರವನ್ನು ಬರೆದುಕೊಳ್ಳಬೇಕು.ಇಲ್ಲವಾದರೇ ಬಂದ ಉತ್ತರವನ್ನು ಹಾಗೆಯೇ ಬರೆದುಕೊಳ್ಳಬೇಕು.
೨) ಚೆಕ್ ಡಿಜಿಟ್ಟಿನ ಹಿಂದಿನ ಅಂಕೆಯ ನಂತರದ ಅಂಕೆಯನ್ನು ಬಿಟ್ಟು ಮುಂದಿನ ಅಂಕೆಯನ್ನು ದ್ವಿಗುಣಗೊಳಿಸಬೇಕು.ಹಾಗೂ ಮೇಲೆ ಹೇಳಿದಂತೆ ಮಾಡಬೇಕು.ಮತ್ತೆ ಮುಂದಿನ ಅಂಕೆಯನ್ನು ಬಿಟ್ಟು ಅದರ ಮುಂದಿನ ಅಂಕೆಯನ್ನು ದ್ವಿಗುಣಗೊಳಿಸಬೇಕು.ಉಳಿದೆಲ್ಲಾ ಅಂಕೆಗಳಿಗೂ ಇದೇ ವಿಧಾನವನ್ನು ಅನುಸರಿಸಬೇಕು.ಉದಾಹರಣೆಗೆ ಚಿತ್ರದಲ್ಲಿರುವ ಕಾರ್ಡನ್ನು ತೆಗೆದುಕೊಂಡರೆ ಅಂಕೆಗಳಾದ ೭,೫,೩,೧,೦,೭,೫,೪ ಗಳನ್ನು ದ್ವಿಗುಣಗೊಳಿಸಬೇಕು.ಹೀಗೆ ಮಾಡಿದ ನಂತರ ಕೊನೆಯಲ್ಲಿ ನಮಗೆ ಒಟ್ಟು ೮ ಅಂಕೆಗಳು ಸಿಗುತ್ತದೆ(೧೫ ಡಿಜಿಟ್ ನಂಬರಿನ ಕಾರ್ಡಿಗೆ ೭ ಅಂಕೆಗಳು ಸಿಗುತ್ತವೆ).
೩) ನಮಗೆ ಉತ್ತರವಾಗಿ ದೊರಕಿದ ಅಂಕೆಗಳನ್ನು ದ್ವಿಗುಣಗೊಳಿಸಿದ ಅಂಕೆಗಳ ಸ್ಥಳದಲ್ಲಿ ಇಡಬೇಕು.ಆಗ ನಮಗೆ ೧೬ ಅಂಕೆಯ ನಂಬರ್ ಸಿಗುತ್ತದೆ.ನಂತರ ಉತ್ತರವಾಗಿ ಸಿಕ್ಕಿದ ನಂಬರಿನ ಎಲ್ಲ ಅಂಕೆಗಳನ್ನು ಕೂಡಬೇಕು.ಬಂದ ಉತ್ತರವು ೧೦ ರಿಂದ ನಿಶ್ಯೇಷವಾಗಿ ಭಾಗಿಸಲ್ಪಡುವ ಸಂಖ್ಯೆಯಾಗಿದ್ದರೆ,ಆ ಕ್ರೆಡಿಟ್ ಕಾರ್ಡ್ ವ್ಯಾಲಿಡ್.
ಅರ್ಥಮಾಡಿಕೊಳ್ಳುವುದು ಕಷ್ಟವಾಯಿತೇ? ಚಿಂತೆ ಇಲ್ಲ..ನಿಮಗಾಗಿ ಇಲ್ಲಿದೆ ಒಂದು ಉದಾಹರಣೆ..
ಹಂತ ೧)ಚಿತ್ರದಲ್ಲಿರುವ ಕಾರ್ಡ್ ನಂಬರ್ 4552720412345678 .
ಮೇಲೆ ತಿಳಿಸಿರುವಂತೆ ಚೆಕ್ ಡಿಜಿಟ್ 8 ರ ನಂತರದ ಅಂಕೆ 7 ನ್ನು ದ್ವಿಗುಣಗೊಳಿಸಬೇಕು.ಉತ್ತರ ೧೪ ಬಂತು.ಇದು ಹತ್ತಕ್ಕಿಂತ ದೊಡ್ಡ ಸಂಖ್ಯೆ.ಹಾಗಾಗಿ ೧+೪=೫ ನಮಗೆ ಬೇಕಾದ ಅಂಕೆ.
ಹಂತ ೨)೫ ದ್ವಿಗುಣ,ಉತ್ತರ ೧೦ ಬಂದಿತು,ನಿಯಮದ ಪ್ರಕಾರ ೧+೦=೧ ನಮಗೆ ಬೇಕಾದ ಅಂಕೆ.
೩ ದ್ವಿಗುಣ,ಉತ್ತರ ೬,ಹತ್ತಕ್ಕಿಂತ ಸಣ್ಣ ಸಂಖ್ಯೆ,ಹಾಗಾಗಿ ೬ ನಮಗೆ ಬೇಕಾದ ಅಂಕೆ.
ಇದೇ ರೀತಿಯಲ್ಲಿ ೧,೦,೭,೫,೪ ಅಂಕೆಗಳನ್ನು ದ್ವಿಗುಣಗೊಳಿಸಿ ನಿಯಮವನ್ನು ಅಳವಡಿಸಿದಾಗ ನಮಗೆ ಕ್ರಮವಾಗಿ ೨,೦,೫,೧,೮ ಬಂದಿತು.
ಹಂತ ೩)ಬಂದ ಅಂಕೆಗಳನ್ನು ದ್ವಿಗುಣಗೊಂಡ ಅಂಕೆಗಳ ಜಾಗದಲ್ಲಿ ಕ್ರಮವಾಗಿ ಬರೆದಾಗ ನಮಗೆ 8512520422641658 ಎಂಬ ೧೬ ಅಂಕೆಯ ನಂಬರ್ ಸಿಕ್ಕಿತು.ಈ ನಮ್ಬೇರಿನ ಪ್ರತಿ ಅಂಕೆಯನ್ನು ಕೂಡಿದಾಗ ನಮಗೆ ೮+೫+೧+೨+೫+೨+೦+೪+೨+೨+೬+೪+೧+೬+೫+೮=೬೧.ಈ ಸಂಖ್ಯೆಯು ಹತ್ತರಿಂದ ನಿಶ್ಯೇಶವಾಗಿ ಭಾಗಿಸಲ್ಪಡುವುದಿಲ್ಲ.ಹಾಗಾಗಿ ಮೇಲಿನ ಕ್ರೆಡಿಟ್ ಕಾರ್ಡ್ ಇನ್ ವ್ಯಾಲಿಡ್.
ಕೊನೆಗೆ:
ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಬೇಕು.ಕ್ರೆಡಿಟ್ ಕಾರ್ಡಿನ ವ್ಯಾಲಿಡಿಟಿಯನ್ನು ನಾನು ವಿವರಿಸಿದ ರೀತಿಯಲ್ಲಿ ಕಂಡುಹಿಡಿಯಬಹುದಾದರೂ ಕೇವಲ ಮೇಲಿನ ನಿಯಮ ಸರಿಹೋಗುವಂತೆ ನಂಬರ್ ಜೋಡಿಸಿ ಬಿಟ್ಟರೆ ಕ್ರೆಡಿಟ್ ಕಾರ್ಡ್ ವ್ಯಾಲಿಡ್ ಎಂದಲ್ಲ.ನಾನು ಮೊದಲೇ ಹೇಳಿದ ಹಾಗೆ ಹತ್ತರ ಘಾತ ೯ ರಷ್ಟು ಅಕೌಂಟ್ ಗಳಿಗೆ ವಿತರಕ ಕಾರ್ಡ್ ನೀಡಬಹುದು.ಇಂತಹ ಅಕೌಂಟ್ ನ ವ್ಯಾಲಿದಿಟಿ ಕಂಡು ಹಿಡಿಯಲು ನಿಯಮಗಳಿವೆ.ಹಾಗೂ ಕಾರ್ಡಿನ expiry ಡೇಟ್ ಕಂಡು ಹಿಡಿಯಲೂ ಸಹ ಬೇರೆ ಬೇರೆ ನಿಯಮಗಳಿವೆ.ಅವು ತನ್ನದೇ ಆದ ಗೌಪ್ಯತೆ ಹೊಂದಿರುತ್ತದೆ.ಅಲ್ಲದೇ ನಮ್ಮ ಕಾರ್ಡಿನ ಸೆಕ್ಯೂರಿಟಿ ಕೋಡ್ (cvv ,cvc ) ಕೂಡ ಪ್ರಮುಖವಾಗಿ ಪರೀಕ್ಷೆಗೆ ಒಳಪಡುತ್ತದೆ.ಹಾಗಾಗಿ ಕ್ರೆಡಿಟ್ ಕಾರ್ಡ್ ನಂಬರ್ ಗಳನ್ನು ಸೃಷ್ಟಿಸುವುದು ತುಂಬಾ ಕಷ್ಟ..ಹಾಗೂ ಅಂತಹ ಪ್ರಯತ್ನ ಖಂಡನಾರ್ಹ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ