23/1/12

ಕಾಲಾಯ ತಸ್ಮೈನಮಃ

ಅದ್ಯಾವ ದೇವರು ಮನುಷ್ಯನಿಗೆ ಮರೆವನ್ನು ನೀಡಿದನೋ ಗೊತ್ತಿಲ್ಲ,ಆದರೂ ಆತನಿಗೊಂದು ಥ್ಯಾಂಕ್ಸ್..ಅದೆಂತಹ ಅಹಿತಕರ ನೆನಪೇ ಇರಲಿ,ದುಖಃವೇ ಇರಲಿ ಕಾಲಾಂತರದಲ್ಲಿ ಮರೆತುಹೋಗುತ್ತದೆ.ಮುಂದೆಂದೋ ಆ ನೆನಪು ಮರುಕಳಿಸಿದಾಗ ತುಸು ನೋವು,ಬೇಜಾರು ಆಗುತ್ತದೆ.ತೀರ ನೋವಿನ ಘಟನೆಯಾದರೆ ಹೆಚ್ಚಿನ ಸಂಕಟವಾಗುತ್ತದೆ.ಆದರೆ ನಮಗೆ ಆ ಘಟನೆ ನಡೆದ ದಿನ ಉಂಟಾಗಿದ್ದ  ದುಃಖ ಇರುವುದಿಲ್ಲ.ಕಾರಣ ನಮ್ಮ ಮನಸ್ಸು ಪಕ್ವವಾಗಿರುತ್ತದೆ.ನಿಧಾನವಾಗಿ ನಾವು ಆ ಘಟನೆಗಳನ್ನು ಮರೆಯುತ್ತಿರುತ್ತೇವೆ.ಕೆಲವೊಮ್ಮೆ ಅಂತಹ ಘಟನೆಗಳನ್ನು ನೆನೆದಾಗ ನಗುವೂ ಬರಬಹುದು!ಬಾಲ್ಯದಲ್ಲಿ ತರಕಾರಿ ತರಲು ಕೊಟ್ಟ ಹತ್ತು ರುಪಾಯಿ ಕಳೆದುಕೊಂಡಾಗ ಮನೆಗೆ ಹೋಗದೇ ಅದೆಲ್ಲೋ ಕುಳಿತು ಅತ್ತಿದ್ದ ಘಟನೆ ಒಮ್ಮೆ ನೆನೆಸಿಕೊಳ್ಳಿ.ಖಂಡಿತ ನಗು ಬರುತ್ತದೆ ಅಲ್ಲವೇ?.ಒಮ್ಮೆ ದುಃಖ ತಂದಿದ್ದ ಘಟನೆ ಮುಂದೆಂದೋ ನಗು ತರಿಸುತ್ತದೆ.ಆದರೆ ಕೆಲವೊಂದು ಘಟನೆಗಳು ಯಾವಾಗಲೂ ದುಃಖವನ್ನೇ ತರುತ್ತವೆ.ಪ್ರೀತಿಪಾತ್ರರ ಅಗಲಿಕೆ,ಅವಮಾನ ಇಂತಹವು ನೆನೆಸಿಕೊಂಡಾಗಲೆಲ್ಲ ದುಃಖವಾಗದಿರದು.ಆದರೂ ಮುಂಚಿನ ತೀವ್ರತೆ ಇರುವುದಿಲ್ಲ. ತುಂಬಾ ಮಳೆಬಂದಾಗ ಹೊರಗೆ ನೋಡಿ,ನೆಲವೆಲ್ಲಾ ಮಳೆ ನೀರಲ್ಲಿ ತೋಯ್ದು ಹೋಗಿರುತ್ತದೆ.ಅದೇ  ಒಂದು ವಾರದ ನಂತರ ನೋಡಿ,ನೆಲ ಮೇಲುನೋಟಕ್ಕೆ ಒಣಗಿದಂತೆ ಕಂಡುಬಂದರೂ ತೇವಾಂಶ ಇದ್ದೇಇರುತ್ತದೆ.ತಿಂಗಳ ನಂತರ ಅದೂ ಇರುವುದಿಲ್ಲ.ನೋವುಗಳು ಕೂಡ ಹಾಗೆಯೇ ಅವು ಬಂದ ದಿನ ಕಣ್ಣೀರಿನ ಕಾಲುವೆಯನ್ನೇ ಹರಿಸಿಬಿಡುತ್ತದೆ.ಕಾಲಾಂತರದಲ್ಲಿ ಮರೆತೇಹೋಗುತ್ತದೆ. ದುಃಖವನ್ನು ಅನುಭವಿಸುತ್ತಲೇ ಮುಂದಿನ ಜೀವನಕ್ಕೆ ಅಣಿಯಾಗಬೇಕು.ಅದಕ್ಕೇ ಹೇಳುವುದು ಜೀವನೋತ್ಸಾಹ ಎಂದು.ಅದು ಇದ್ದವರಿಗೆ ಎಂತಹ ನೋವು ಸಹ ಹೆಚ್ಚುದಿನ ಪೀಡಿಸುವುದಿಲ್ಲ.ಆದರೆ ಕೆಲವು ದುರ್ಬಲ ಮನಸ್ಸಿನ ಜನರಿಗೆ ಇದು ಸಾಧ್ಯವಾಗುವುದಿಲ್ಲ.ಅಂತಹ ಮನಸ್ಸಿನವರು ಆತ್ಮಹತ್ಯೆಯಂತಹ ಅತಿರೇಕಕ್ಕೆ ಹೋಗುತ್ತಾರೆ.ಅಂತಹ ಸನ್ನಿವೇಶ ಬಂದಾಗ ತಮ್ಮ ಆತ್ಮಹತ್ಯೆಯ ನಿರ್ಧಾರವನ್ನು ಸ್ವಲ್ಪಕಾಲ ಮುಂದೂಡಿದರೂ ಸಾಕು.ಮತ್ತೆಂದೂ ಮನಸ್ಸಿನಲ್ಲಿ ಅಂತಹ ವಿಚಾರ ಸುಳಿಯುವುದಿಲ್ಲ. ನಿಜ! ಸಮಸ್ಯೆಗಳು,ನೋವುಗಳು ಬಂದ ದಿನ ನಮಗೆ ಯಾವುದೇ ಪರಿಹಾರಗಳು ತೋಚುವುದಿಲ್ಲ.ಆದರೆ ಉತ್ತರ ಇಲ್ಲದ ಪ್ರಶ್ನೆಗಳು ಖಂಡಿತ ಇರುವುದಿಲ್ಲ.ಉತ್ತರ ಹುಡುಕಲು ನಮ್ಮಲ್ಲಿ ತಾಳ್ಮೆಇರಬೇಕಷ್ಟೇ.ಜೀವನ ನಮ್ಮನ್ನು ಹೆಚ್ಚುಕಾಲ ಕೊರಗುತ್ತಾ ಕೂರಲು ಬಿಡುವುದಿಲ್ಲ.ನಮ್ಮನ್ನು ಮರಳಿ ನಮ್ಮ ಕೆಲಸಗಳಿಗೆ ಹಚ್ಚುತ್ತದೆ.ಯೋಚಿಸಿನೋಡಿ ಬಾಲ್ಯದಲ್ಲಿ ಹತ್ತು ರುಪಾಯಿ ಕಳೆದುಕೊಂಡಾಗ ಆತ್ಮಹತ್ಯೆಮಾಡಿಕೊಂಡಿದ್ದರೆ,ಆ ಘಟನೆಯನ್ನು ಈಗ ನೆನೆಸಿಕೊಂಡು ನಗಲು ನೀವೆಲ್ಲಿ ಇರುತ್ತಿದ್ದಿರಿ?ಅಲ್ಲವೇ?.ಹತ್ತು ರುಪಾಯಿ ನಿಮಗೆ ಈಗ ಚಿಕ್ಕದು,ಆದರೆ ಅಂದು ಅದಕ್ಕಾಗಿಯೇ ನೀವು ಅತ್ತಿದ್ದಿರಿ.ಅಂತೆಹೇ ಇಂದು ದೊಡ್ಡದಾಗಿ ಕಾಣುವ ಸಮಸ್ಯೆ ಮುಂದೆ ತುಂಬಾ ಸಣ್ಣದಾಗಿ ಕಾಣುತ್ತದೆ.ಇಂದು ಅಳಿಸಿದ ಘಟನೆ ಮುಂದೆ ನಗಿಸಲೂಬಹುದು.  ಅದಕ್ಕಾಗಿಯೇ ಅಂಗ್ಲ ಕವಿಯೊಬ್ಬ ಹೀಗೆ ಹೇಳಿರುವುದು "Expect love;every feeling is subjected to time" ಎಂದು.ಜೀವನ ಆಕಸ್ಮಿಕಗಳ ಆಗರ.ತಮಾಷೆಯಾಗಿ ಹೇಳುವುದಾದರೆ "ರಾತ್ರಿ ಉದ್ದಿನ ಹಿಟ್ಟು ನೆನೆಸಿರುತ್ತೀರಿ.ಬೆಳಗ್ಗೆ ಎದ್ದರೆ ಇಡ್ಲಿ,ಇಲ್ಲದಿದ್ದರೆ ಅದೇ ಹಿಟ್ಟಿನಲ್ಲಿ ವಡೆ".ಇಂತಹ ಆಕಸ್ಮಿಕಗಳಿಗೆ ಒಗ್ಗಿಕೊಂಡೇ ನಾವು ಜೀವನ ಸಾಗಿಸಬೇಕು.ದಾಸರು ಹೇಳಿದಂತೆ "ಈಸ ಬೇಕು ಇದ್ದು ಜೈಸಬೇಕು".ಎಷ್ಟೇ ಆದರು "ಕಾಲಾಯ ತಸ್ಮೈನಮಃ" ಅಲ್ಲವೇ?
                                     

21/1/12

ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ...ನಿಮಗಿದು ಗೊತ್ತೇ?

ವಶ್ಯಕವಿದ್ದಾಗಲೆಲ್ಲ ನಮ್ಮ ಖಾತೆಯಿಂದ ಹಣ ತೆಗೆದುಕೊಳ್ಳಲು ಡೆಬಿಟ್ ಕಾರ್ಡ್ ಬಳಸಿಕೊಳ್ಳುತ್ತೇವೆ.ಇತ್ತೀಚೆಗಂತೂ ಸಾಮಾನ್ಯ ಜನರ ಕೈಯಲ್ಲೂ ಇದು ಕಾಣಸಿಗುತ್ತದೆ.ಅಷ್ಟೇ ಉಪಯೋಗಕಾರಿಯಾದ ಇನ್ನೊಂದು ಕಾರ್ಡ್ ಎಂದರೆ ಅದು ಕ್ರೆಡಿಟ್ ಕಾರ್ಡ್.ಡೆಬಿಟ್ ಕಾರ್ಡ್ ಬಳಸುವಷ್ಟು ಜನ ಕ್ರೆಡಿಟ್ ಕಾರ್ಡನ್ನು ಬಳಸುವುದಿಲ್ಲ.ಆದರೂ ಇತ್ತೀಚೆಗೆ ಕ್ರೆಡಿಟ್ ಕಾರ್ಡಿನ ಬಳಕೆ ಹೆಚ್ಚುತ್ತಿದೆ.ಜೇಬಿನಲ್ಲಿ ಹಣದ ಬದಲು ಕ್ರೆಡಿಟ್ ಕಾರ್ಡ್ ಒಯ್ಯುವ ಹೊಸ ಪ್ಯಾಶನ್ ಶುರುವಾಗಿಬಿಟ್ಟಿದೆ.ಕ್ರೆಡಿಟ್ ಕಾರ್ಡಿನ ಇನ್ನೊಂದು ವಿಶೇಷ ಎಂದರೆ ನಿಮ್ಮ ಜೇಬಿನಲ್ಲಿ ಮಾತ್ರವಲ್ಲ ನಿಮ್ಮ ಬ್ಯಾಂಕ್ ಖಾತೆಯಲ್ಲೂ ಹಣವಿರುವ ಅವಶ್ಯಕತೆ ಇಲ್ಲ.ಬೇಕಾದ್ದನ್ನು ಕೊಂಡುಕೊಳ್ಳಿ,ತಿಂಗಳ ಕೊನೆಯಲ್ಲಿ ಹಣ ಕೊಡಿ ಎಂಬ ಸ್ಕೀಮ್ ಗಳಿವೆ.ಹಾಗಾಗಿ ತಿಂಗಳು ಪೂರ್ತಿ ಅವಶ್ಯಕ ವಸ್ತುಗಳನ್ನೂ ಖರೀದಿಸಿ ತಿಂಗಳ ಕೊನೆಗೆ ಹಣಪಾವತಿಸಬಹುದು(ಆದರೆ ತುಸು ಬಡ್ಡಿಯೊಂದಿಗೆ).
ಆನ್ ಲೈನ್ ವ್ಯವಹಾರದಲ್ಲಿ ಸಹ ಕ್ರೆಡಿಟ್ ಕಾರ್ಡ್ ಬಳಕೆಯಾಗುತ್ತದೆ.ನಮ್ಮ ಕ್ರೆಡಿಟ್ ಕಾರ್ಡಿನ ನಂಬರ್,ಪಡೆದವರ ವಿವರ,ಹಾಗು ಇತರ ಕೆಲವು ವಿವರಗಳನ್ನು ನಾವು ಅಲ್ಲಿ ನಮೂದಿಸಬೇಕಾಗುತ್ತದೆ.ನಮ್ಮ ಕ್ರೆಡಿಟ್ ಕಾರ್ಡ್ ವ್ಯಾಲಿಡ್ ಆಗಿದ್ದರೆ,ನಮ್ಮ ಇತರ ವಿವರಗಳು ಸರಿಯಾಗಿದ್ದರೆ ನಮ್ಮ ಕೆಲಸ ಆಗುತ್ತದೆ.ಇಲ್ಲದಿದ್ದರೆ ನಮ್ಮ ಕ್ರೆಡಿಟ್ ಕಾರ್ಡ್ ಇನ್ ವ್ಯಾಲಿಡ್  ಎಂಬ ಸಂದೇಶ ಕಾಣಸಿಗುತ್ತದೆ.
ಹಾಗಿದ್ದರೆ ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ ಎಂದರೆ ಏನು?ಅದನ್ನು ಹೇಗೆ ತಿಳಿದುಕೊಳ್ಳುತ್ತಾರೆ?
ಈ ಪ್ರಶ್ನೆಗಳಿಗೆ ನಂತರ ಬರೋಣ.ಅದಕ್ಕಿಂತ ಮೊದಲು ಕ್ರೆಡಿಟ್ ಕಾರ್ಡ್ ನ ನಂಬರ್ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಕ್ರೆಡಿಟ್ ಕಾರ್ಡನ್ನು ನಿಡುವ ಅನೇಕ ಕಂಪೆನಿಗಳಿವೆ.ಉದಾಹರಣೆಯ ಸಲುವಾಗಿ ವೀಸಾ ಕಾರ್ಡಿನ ಚಿತ್ರಹಾಕಲಾಗಿದೆ. ಕ್ರೆಡಿಟ್ ಕಾರ್ಡಿನ ಮೇಲೆ ಒಟ್ಟು ೧೬ ನಂಬರ್ ಗಳಿರುತ್ತದೆ (ಕೆಲವೊಮ್ಮೆ ೧೫ ಇರುತ್ತದೆ) .ಮೊದಲ ಆರು ಕಾರ್ಡ್ ವಿತರಕರನ್ನು ಸೂಚಿಸುತ್ತದೆ.ಕಾರ್ಡ್ ಮೇಲೆ ಇರುವಂತೆ 455272 ವೀಸಾ ಕಾರ್ಡ್ ಎಂಬುದನ್ನು ಸೂಚಿಸುತ್ತದೆ.ಕೊನೆಯ ನಂಬರ್,ಅಂದರೆ 8.ಅದು "ಚೆಕ್ ಡಿಜಿಟ್".ಅದನ್ನು ಕೆಲವು ನಿಯಮಾನುಸಾರ ಹಾಕಲಾಗಿರುತ್ತದೆ.ಆ ನಿಯಮವನ್ನೇ ನಾವು ತಿಳಿಯಬೇಕಾಗಿರುವುದು.ಮೊದಲ ೬ ಡಿಜಿಟ್ ಹಾಗೂ ಕೊನೆಯ ಒಂದು ಡಿಜಿಟನ್ನು ಬಿಟ್ಟರೆ ಉಳಿಯುವುದು ಒಂಬತ್ತು ಡಿಜಿಟ್ ಗಳು ಅಕೌಂಟ್ ನಂಬರ್ ಅನ್ನು ಸೂಚಿಸುತ್ತದೆ(೧೫ ನಂಬರ್ ಇರುವ ಕಾರ್ಡಿನಲ್ಲಿ ೮ ಡಿಜಿಟ್ ಅಕೌಂಟ್ ನಂಬರ್ ಇರುತ್ತದೆ).೦ ಇಂದ ೯ ರ ವರೆಗಿನ ಅಂಕೆಯನ್ನು ಬೇರೆ ಬೇರೆ ಕಾಂಬಿನೇಶನ್ ಗಳಲ್ಲಿ ಜೋಡಿಸಿರಲಾಗಿರುತ್ತದೆ.ಇದೇ ರೀತಿ ಒಟ್ಟು ೧೦ರ ಘಾತ ೯ ರಷ್ಟು ಬೇರೆ ಬೇರೆ ಅಕೌಂಟ್ ನಂಬರ್ ಗಳಿಗೆ ಒಬ್ಬ ವಿತರಕ ಕಾರ್ಡ್ ವಿತರಿಸಬಹುದು.

ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ:
ಕ್ರೆಡಿಟ್  ಕಾರ್ಡ್ ಉಪಯೋಗಗಳು ಎಷ್ಟಿವೆಯೋ ಅಷ್ಟೇ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಜನರಿದ್ದಾರೆ.ನಾನು ಮೊದಲೇ ಹೇಳಿದಂತೆ ಆನ್ ಲೈನ್ ನಲ್ಲಿ ವ್ಯವಹರಿಸುವಾಗ ಕ್ರೆಡಿಟ್ ಕಾರ್ಡ್ ನ ನಂಬರ್ ನಮೂದಿಸುವ ಸ್ಥಳದಲ್ಲಿ ತೋಚಿದ ಸಂಖ್ಯೆಯನ್ನು ಬರೆದು ಹಾಕುತ್ತಾರೆ.ಪರಿಶೀಲಿಸಿದ ನಂತರ ಆ ನಂಬರಿನ ಕಾರ್ಡ್ ಅಸ್ತಿತ್ವದಲ್ಲಿ ಇಲ್ಲ ಎಂಬುದು ತಿಳಿದು ಬರುತ್ತದೆ.ಆದರೆ ಅನಾವಶ್ಯಕವಾಗಿ ಆನ್ ಲೈನ್ ಕಂಪನಿಗಳಿಗೆ ಸಮಯ ಹಾಗೂ ಹಣ ವ್ಯಯವಾಗಿರುತ್ತದೆ.ಇದನ್ನು ತಡೆಗಟ್ಟಲು ಕಾರ್ಡ್ ವಿತರಕರು ಕೆಲವೊಂದು ನಿಯಮಗಳನ್ನು ಅನುಸರಿಸಿ ಕಾರ್ಡಿನ ಕೊನೆಯ ಸಂಖ್ಯೆಯನ್ನು ನೀಡುತ್ತಾರೆ.ಆ ನಿಯಮದ ಅನ್ವಯ ಪ್ರೋಗ್ರಾಮ್ ಗಳನ್ನು ಮಾಡಿ ನಿಯಮದ ಅನ್ವಯ ಇರದ ನಂಬರ್ ಅನ್ನು ಕೂಡಲೇ ಕಂಡುಹಿಡಿಯ ಬಹುದು.ಇಂತಹ ಅನೇಕ ನಿಯಮಗಳನ್ನು ಕಾರ್ಡ್ ವಿತರಕರು ಅಳವಡಿಸಿ ಕೊಂಡಿರುತ್ತಾರೆ.ಇದರಿಂದ ಆನ್ ಲೈನ್ ಕಂಪನಿಗಳು ನಿರಾಳವಾಗಿರಬಹುದು.ಬಹಳಷ್ಟು ವಿತರಕರು ಬಳಸುವ ಅಂತಹ ಒಂದು ನಿಯಮವೆಂದರೆ ಮಾಡ್ ೧೦ ಚೆಕ್ಕಿಂಗ್ ನಿಯಮ.

ಲುಹ್ನ್ ಅಥವಾ ಮಾಡ್ ೧೦ ಚೆಕ್ಕಿಂಗ್ ನಿಯಮ: 
೧೯೫೪ರಲ್ಲಿ IBM ಕಂಪನಿಯ ಹಂಸ್ ಲುಹ್ನ್ (hans luhn )  ಮಂಡಿಸಿದ ಒಂದು ನಿಯಮವೇ ಮಾಡ್ ೧೦ ಚೆಕ್ಕಿಂಗ್ ನಿಯಮ.ಇದರ ಅನ್ವಯವೇ ಬಹಳಷ್ಟು ಕಂಪನಿಗಳು ಕಾರ್ಡ್ ನಂಬರ್ ನೀಡುತ್ತವೆ.ಈ ನಿಯಮವನ್ನೇ ಕ್ರೆಡಿಟ್ ಕಾರ್ಡ್ ವ್ಯಾಲಿಡಿಟಿ ಕಂಡು ಹಿಡಿಯಲು ಬಳಸಲಾಗುತ್ತದೆ.
ವಿವರಣೆ:
೧) ಮೊದಲಿಗೆ ಚೆಕ್  ಡಿಜಿಟ್ ನ ಹಿಂದಿನ ಅಂಕೆಯನ್ನು ದ್ವಿಗುಣಗೊಳಿಸಬೇಕು.ಈ ರೀತಿ ಮಾಡಿದ ನಂತರ ಬಂದ ಉತ್ತರವು ಹತ್ತು ಹಾಗೂ ಅದಕ್ಕಿಂತ ಹೆಚ್ಚಿದ್ದರೆ,ಆ ಸಂಖ್ಯೆಯ ಎರಡೂ ಡಿಜಿಟ್ ನ್ನು ಕೂಡಿ ಬಂದ ಉತ್ತರವನ್ನು ಬರೆದುಕೊಳ್ಳಬೇಕು.ಇಲ್ಲವಾದರೇ ಬಂದ ಉತ್ತರವನ್ನು ಹಾಗೆಯೇ  ಬರೆದುಕೊಳ್ಳಬೇಕು.
೨)  ಚೆಕ್  ಡಿಜಿಟ್ಟಿನ ಹಿಂದಿನ ಅಂಕೆಯ ನಂತರದ ಅಂಕೆಯನ್ನು ಬಿಟ್ಟು ಮುಂದಿನ ಅಂಕೆಯನ್ನು ದ್ವಿಗುಣಗೊಳಿಸಬೇಕು.ಹಾಗೂ ಮೇಲೆ ಹೇಳಿದಂತೆ ಮಾಡಬೇಕು.ಮತ್ತೆ ಮುಂದಿನ ಅಂಕೆಯನ್ನು ಬಿಟ್ಟು ಅದರ ಮುಂದಿನ ಅಂಕೆಯನ್ನು ದ್ವಿಗುಣಗೊಳಿಸಬೇಕು.ಉಳಿದೆಲ್ಲಾ ಅಂಕೆಗಳಿಗೂ ಇದೇ ವಿಧಾನವನ್ನು ಅನುಸರಿಸಬೇಕು.ಉದಾಹರಣೆಗೆ ಚಿತ್ರದಲ್ಲಿರುವ ಕಾರ್ಡನ್ನು ತೆಗೆದುಕೊಂಡರೆ ಅಂಕೆಗಳಾದ ೭,೫,೩,೧,೦,೭,೫,೪ ಗಳನ್ನು ದ್ವಿಗುಣಗೊಳಿಸಬೇಕು.ಹೀಗೆ ಮಾಡಿದ ನಂತರ ಕೊನೆಯಲ್ಲಿ ನಮಗೆ ಒಟ್ಟು ೮ ಅಂಕೆಗಳು ಸಿಗುತ್ತದೆ(೧೫ ಡಿಜಿಟ್ ನಂಬರಿನ ಕಾರ್ಡಿಗೆ ೭ ಅಂಕೆಗಳು ಸಿಗುತ್ತವೆ).
೩) ನಮಗೆ ಉತ್ತರವಾಗಿ ದೊರಕಿದ ಅಂಕೆಗಳನ್ನು ದ್ವಿಗುಣಗೊಳಿಸಿದ ಅಂಕೆಗಳ ಸ್ಥಳದಲ್ಲಿ ಇಡಬೇಕು.ಆಗ ನಮಗೆ ೧೬ ಅಂಕೆಯ ನಂಬರ್ ಸಿಗುತ್ತದೆ.ನಂತರ ಉತ್ತರವಾಗಿ ಸಿಕ್ಕಿದ ನಂಬರಿನ ಎಲ್ಲ ಅಂಕೆಗಳನ್ನು ಕೂಡಬೇಕು.ಬಂದ ಉತ್ತರವು ೧೦ ರಿಂದ ನಿಶ್ಯೇಷವಾಗಿ ಭಾಗಿಸಲ್ಪಡುವ ಸಂಖ್ಯೆಯಾಗಿದ್ದರೆ,ಆ ಕ್ರೆಡಿಟ್ ಕಾರ್ಡ್ ವ್ಯಾಲಿಡ್.

 ಅರ್ಥಮಾಡಿಕೊಳ್ಳುವುದು ಕಷ್ಟವಾಯಿತೇ? ಚಿಂತೆ ಇಲ್ಲ..ನಿಮಗಾಗಿ ಇಲ್ಲಿದೆ ಒಂದು ಉದಾಹರಣೆ..

ಹಂತ ೧)ಚಿತ್ರದಲ್ಲಿರುವ ಕಾರ್ಡ್ ನಂಬರ್ 4552720412345678 .
ಮೇಲೆ ತಿಳಿಸಿರುವಂತೆ ಚೆಕ್ ಡಿಜಿಟ್ 8 ರ ನಂತರದ ಅಂಕೆ 7 ನ್ನು ದ್ವಿಗುಣಗೊಳಿಸಬೇಕು.ಉತ್ತರ ೧೪ ಬಂತು.ಇದು ಹತ್ತಕ್ಕಿಂತ ದೊಡ್ಡ ಸಂಖ್ಯೆ.ಹಾಗಾಗಿ ೧+೪=೫ ನಮಗೆ ಬೇಕಾದ ಅಂಕೆ.
ಹಂತ ೨)೫ ದ್ವಿಗುಣ,ಉತ್ತರ ೧೦ ಬಂದಿತು,ನಿಯಮದ ಪ್ರಕಾರ  ೧+೦=೧ ನಮಗೆ ಬೇಕಾದ ಅಂಕೆ.
             ೩ ದ್ವಿಗುಣ,ಉತ್ತರ ೬,ಹತ್ತಕ್ಕಿಂತ ಸಣ್ಣ ಸಂಖ್ಯೆ,ಹಾಗಾಗಿ ೬ ನಮಗೆ ಬೇಕಾದ ಅಂಕೆ.
              ಇದೇ ರೀತಿಯಲ್ಲಿ ೧,೦,೭,೫,೪ ಅಂಕೆಗಳನ್ನು ದ್ವಿಗುಣಗೊಳಿಸಿ ನಿಯಮವನ್ನು ಅಳವಡಿಸಿದಾಗ ನಮಗೆ ಕ್ರಮವಾಗಿ ೨,೦,೫,೧,೮ ಬಂದಿತು.
ಹಂತ ೩)ಬಂದ ಅಂಕೆಗಳನ್ನು ದ್ವಿಗುಣಗೊಂಡ ಅಂಕೆಗಳ ಜಾಗದಲ್ಲಿ ಕ್ರಮವಾಗಿ ಬರೆದಾಗ ನಮಗೆ 8512520422641658 ಎಂಬ ೧೬ ಅಂಕೆಯ ನಂಬರ್ ಸಿಕ್ಕಿತು.ಈ ನಮ್ಬೇರಿನ ಪ್ರತಿ ಅಂಕೆಯನ್ನು ಕೂಡಿದಾಗ ನಮಗೆ ೮+೫+೧+೨+೫+೨+೦+೪+೨+೨+೬+೪+೧+೬+೫+೮=೬೧.ಈ ಸಂಖ್ಯೆಯು ಹತ್ತರಿಂದ ನಿಶ್ಯೇಶವಾಗಿ ಭಾಗಿಸಲ್ಪಡುವುದಿಲ್ಲ.ಹಾಗಾಗಿ ಮೇಲಿನ ಕ್ರೆಡಿಟ್ ಕಾರ್ಡ್ ಇನ್ ವ್ಯಾಲಿಡ್.

ಕೊನೆಗೆ:
ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಬೇಕು.ಕ್ರೆಡಿಟ್ ಕಾರ್ಡಿನ ವ್ಯಾಲಿಡಿಟಿಯನ್ನು ನಾನು ವಿವರಿಸಿದ ರೀತಿಯಲ್ಲಿ  ಕಂಡುಹಿಡಿಯಬಹುದಾದರೂ ಕೇವಲ ಮೇಲಿನ ನಿಯಮ ಸರಿಹೋಗುವಂತೆ ನಂಬರ್ ಜೋಡಿಸಿ ಬಿಟ್ಟರೆ ಕ್ರೆಡಿಟ್ ಕಾರ್ಡ್ ವ್ಯಾಲಿಡ್ ಎಂದಲ್ಲ.ನಾನು ಮೊದಲೇ ಹೇಳಿದ ಹಾಗೆ ಹತ್ತರ ಘಾತ ೯ ರಷ್ಟು  ಅಕೌಂಟ್ ಗಳಿಗೆ ವಿತರಕ ಕಾರ್ಡ್ ನೀಡಬಹುದು.ಇಂತಹ ಅಕೌಂಟ್ ನ ವ್ಯಾಲಿದಿಟಿ ಕಂಡು ಹಿಡಿಯಲು ನಿಯಮಗಳಿವೆ.ಹಾಗೂ ಕಾರ್ಡಿನ expiry ಡೇಟ್ ಕಂಡು ಹಿಡಿಯಲೂ ಸಹ ಬೇರೆ ಬೇರೆ ನಿಯಮಗಳಿವೆ.ಅವು ತನ್ನದೇ ಆದ ಗೌಪ್ಯತೆ ಹೊಂದಿರುತ್ತದೆ.ಅಲ್ಲದೇ ನಮ್ಮ ಕಾರ್ಡಿನ ಸೆಕ್ಯೂರಿಟಿ ಕೋಡ್ (cvv ,cvc ) ಕೂಡ ಪ್ರಮುಖವಾಗಿ ಪರೀಕ್ಷೆಗೆ ಒಳಪಡುತ್ತದೆ.ಹಾಗಾಗಿ ಕ್ರೆಡಿಟ್ ಕಾರ್ಡ್ ನಂಬರ್ ಗಳನ್ನು ಸೃಷ್ಟಿಸುವುದು ತುಂಬಾ ಕಷ್ಟ..ಹಾಗೂ ಅಂತಹ ಪ್ರಯತ್ನ ಖಂಡನಾರ್ಹ..



 


13/1/12

ವಿವೇಕಾನಂದರ ೧೫೦ನೇ ಜಯಂತಿ


















"ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು  ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ , ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿವೊಂದು ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರಿಸುವುದಕ್ಕೆ ಒಂದು ಕರ್ಮ ಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯು ಮಾಧುರ್ಯ,ಔದಾರ್ಯ,ಪಾವಿತ್ರ್ಯ,ಶಾಂತಿ-ಇವುಗಳಲ್ಲಿ ಮತ್ತು ಎಲ್ಲಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲ್ಲಿ ತನ್ನ ಪರಾಕಾಷ್ಟೆಯನ್ನು ಮುಟ್ಟಿದ್ದರೆ, ಅದು ಈ ಭರತ ಖಂಡವೇ ಆಗಿದೆ".
ಭಾರತದ ಹಿರಿಮೆಯ ಬಗ್ಗೆ ಸ್ವಾಮೀಜಿಯವರು ಹೇಳಿದ ಮಾತುಗಳಿವು.ಸ್ವಾಮೀಜಿಯವರಿಗೆ ಪ್ರಾಚೀನ ಭಾರತದ ಬಗ್ಗೆ ಹೆಮ್ಮೆಇತ್ತು .ಆಂಗ್ಲರಾದಿಯಾಗಿ ಹಲವು ವಿದೇಶಿಗರ ಆಕ್ರಮಣಕ್ಕೆ ಒಳಗಾದ ಭಾರತ ತನ್ನ ಸಂಪತ್ತನ್ನು ಮಾತ್ರವಲ್ಲದೇ ತನ್ನ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾ ಸಾಗಿತ್ತು.ಇಂತಹ ಕಾಲಘಟ್ಟದಲ್ಲಿ ರಾಷ್ಟ್ರಜಾಗೃತಿಯನ್ನ ಉಂಟುಮಾಡಿದವರು ಸ್ವಾಮೀಜಿ.ಸ್ವಾಮೀಜಿಯವರ ಬೋಧನೆಗಳು ಕೇವಲ ಮಾತುಗಳಾಗಿರಲಿಲ್ಲ ಅದೊಂದು ಸ್ಪೂರ್ತಿಯ ಸೆಲೆಯಾಗಿರುತಿತ್ತು.ಸಾಯುವವನಲ್ಲೂ ಬದುಕುವ ಕಿಚ್ಚು ಹೊತ್ತಿಸುವ ಸಿಂಹವಾಣಿಗಳಾಗಿರುತಿತ್ತು.
                                       ದೇಶ ದೇಶಗಳನ್ನೂ ಸುತ್ತಿ ಭಾರತದ ಹಾಗೂ ಹಿಂದೂ ಧರ್ಮದ ಹಿರಿಮೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು ಸ್ವಾಮೀಜಿ.ಸ್ವಾಮೀಜಿಯವರು ಅಮೇರಿಕಾದಲ್ಲಿ ಮಾಡಿದ ಭಾಷಣ ಎಷ್ಟರಮಟ್ಟಿಗಿತ್ತೆಂದರೆ ಮಾರನೆಯ ದಿನ ಅಮೆರಿಕಾದ ಅನೇಕ ಪತ್ರಿಕೆಗಳು ಭಾರತದಂತಹ ಜ್ಞಾನಶೀಲ ರಾಷ್ಟ್ರಕ್ಕೆ,ಧರ್ಮ ಪ್ರಬುದ್ಧ ರಾಷ್ಟ್ರಕ್ಕೆ ಧರ್ಮ ಪ್ರಚಾರಕರನ್ನು ಕಳಿಸುವುದು ಅರ್ಥಹೀನ ಎಂದು ವರದಿಮಾಡಿದ್ದವು.ಸ್ವಾಮೀಜಿಯವರ ಬೋಧನೆಗಳು ವಿದೇಶಿಯರ ದಾಳಿಗೆ ಒಳಗಾಗಿದ್ದ ಭಾರತೀಯರಲ್ಲಿ ಹೊಸ ಚೈತನ್ಯ ಹುಟ್ಟಿಸಿತ್ತು.
ಸ್ವತಂತ್ರ ಸಂಗ್ರಾಮದಲ್ಲಿ ಸ್ವಾಮೀಜಿಯವರ ಪಾತ್ರ:
ಸುಭಾಷ್ ಚಂದ್ರ ಬೋಸ್,ಮಹಾತ್ಮ ಗಾಂಧೀಜಿಯವರಾದಿಯಾಗಿ  ಅನೇಕ ಸ್ವಾತಂತ್ರ ಹೋರಾಟಗಾರರು ಸ್ವಾಮೀಜಿಯವರಿಂದ ಪ್ರಭಾವಿತರಾಗಿದ್ದರು.ಅವರ ವಾಣಿಗಳೇ ಆಗಿರುತ್ತಿದ್ದವು,ಸತ್ತವನನ್ನು ಬಡಿದು ಎಚ್ಚರಿಸುತ್ತಿದ್ದವು,ಎಂತಹ ಚಾರಿತ್ರ್ಯ ಹೀನನನ್ನೂ ಸಹ ಚಾರಿತ್ರ್ಯಶೀಲನನ್ನಾಗಿ ಮಾಡಿಬಿಡುತ್ತಿದ್ದವು.ಯುವಕರು ಸಂಗಟಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದುದರ ಹಿಂದೆ ಇದ್ದ ಪ್ರೇರಣಾಶಕ್ತಿ ಸ್ವಾಮಿಜಿಯೇ ಸರಿ.
"ಏಳಿ,ಎದ್ದೇಳಿ!ಜಾಗೃತರಾಗಿ.ಗುರಿ ಸೇರುವವರೆವಿಗೂ ನಿಲ್ಲದಿರಿ" ಎಂಬ ಸಿಡಿಲಿನ ಕರೆ ಭಾರತದ ಅಂದಿನ ಯುವ ಪೀಳಿಗೆ ಬ್ರಿಟಿಷರ ವಿರುದ್ಧ ಟೊಂಕಕಟ್ಟಿನಿಲ್ಲುವಂತೆ ಪ್ರೇರೇಪಿಸಿತ್ತು.ಇದನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದರು."
ಯುವಕರಿಗೆ ಸ್ವಾಮೀಜಿ ಕೊಟ್ಟ ಕರೆ:
ಯಾವುದೇ ದೇಶದ ಏಳಿಗೆ ಅವಲಂಬಿಸಿರುವುದು ಅದರ ಶ್ರೀಮಂತಿಕೆಯ ಮೇಲೆ ಅಲ್ಲ.ಅದು ನಿಂತಿರುವುದು ಎಂತಹ ಯುವಕರನ್ನು ಅದು ತಯಾರುಮಾಡುತ್ತದೆ ಎಂಬುದರ ಮೇಲೆ.ಫ್ರಾನ್ಸ್ ಸೋತ ಒಂದು ಯುದ್ಧದ ನಂತರ ಫ್ರಾನ್ಸ್ ನ ಸೈನ್ಯಾಧಿಕಾರಿಯೊಬ್ಬ ಹೀಗೆ ಪ್ರತಿಕ್ರಿಯೆ ನೀಡುತ್ತಾನೆ "ಫ್ರಾನ್ಸ್ ಸೋತದ್ದು ಯುದ್ಧ ರಂಗದಲ್ಲಿ ಅಲ್ಲ,ಫ್ರಾನ್ಸ್ ಸೋತದ್ದು ಪ್ಯಾರಿಸ್ಸಿನ ನೃತ್ಯಕೇಂದ್ರ ಗಳಲ್ಲಿ.ನಮ್ಮ ಯುವಕರು ತಮ್ಮ ದೇಶವನ್ನು ಈ ಯುದ್ಧದಲ್ಲಿ ಬೆಂಬಲಿಸದೆ ಅಲ್ಲಿ ಕುಳಿತಿದ್ದರಿಂದ ನಾವು ಸೋತೆವು".ಆತನ ಮಾತಿನಲ್ಲಿರುವ ಅರ್ಥವನ್ನು ಗಮನಿಸಿದರೆ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಏನೆಂಬುದು ನಮಗೆ ಅರ್ಥವಾಗುತ್ತದೆ.ಆದ್ದರಿಂದಲೇ ಸ್ವಾಮೀಜಿಯವರು ಯುವಕರಿಗೆ ಅನೇಕ ಸಂದೇಶಗಳನ್ನು ನೀಡಿದ್ದಾರೆ.ಯುವ ಪೀಳಿಗೆ ಶೀಲ,ಚಾರಿತ್ರ್ಯ,ಬುದ್ಧಿ ಶಕ್ತಿ,ದೈಹಿಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.ಯುವಕರಿಗೆ ನೀಡುವ ಶಿಕ್ಷಣ ಅವರನ್ನು ಶಕ್ತಿಶಾಲಿಯನ್ನಾಗಿಸಬೇಕೆ ಹೊರತು ದುರ್ಬಲರನ್ನಾಗಿ ಅಲ್ಲ ಎಂಬುದು ಸ್ವಾಮೀಜಿಯವರ ಅನಿಸಿಕೆಯಾಗಿತ್ತು. ಸ್ವಾಮೀಜಿಯವರ ಮಾತಿನಲ್ಲಿ "ನೀವು ನಿಮ್ಮ ಮಗುವಿಗೆ ಯಾವ ಕೃಷ್ಣನ ಬಗ್ಗೆ ತಿಳಿಸಿದ್ದೀರಿ.ಗೋಕುಲದಲ್ಲಿ ಹೆಂಗಳೆಯರ ನಡುವೆ ವಿನೋದ ಮಾಡುತ್ತಿದ್ದ ಕೃಷ್ಣನ ಬಗ್ಗೆ ತಿಳಿಸಿದ್ದಿರೋ  ಅಥವಾ ಮಂಜುಳವಾದ ಭಗವಧ್ಗೀತೆಯನ್ನು ತನ್ನ ಸಿಂಹ ಧ್ವನಿಯಿಂದ ವಾಚಿಸಿದ ಕೃಷ್ಣನ ಬಗ್ಗೆ ತಿಳಿಸಿದ್ದಿರೋ? ನೀವು  ಮೊದಲನೇ ಕೃಷ್ಣನ ಬಗ್ಗೆ ತಿಳಿಸಿದ್ದರೆ ಮೊದಲು ನಿಮ್ಮ ಮಗುವಿಗೆ ನಗಾರಿ,ಡಮರುಗದ ಸದ್ದನ್ನು ಕೇಳಿಸಿ.ಇಲ್ಲವಾದರೇ ಇಡೀ ದೇಶವೇ ಹೆಂಗಳೆಯರ ಬೀಡಾಗಿ ಹೋದೀತು".ಇಂತಹ ಕೆಚ್ಚಿನ ಸಿಂಹವಾಣಿ ಸ್ವಾಮೀಜಿಯವರದ್ದಾಗಿತ್ತು.ಇದೇ ಅಲ್ಲವೇ ಯುವಕರನ್ನು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಂದು ನಿಲ್ಲಿಸಿದ್ದು.   

                           ಸ್ವಾಮೀಜಿಯವರು ಉತ್ತರ ನೀಡದ ಸಮಸ್ಯೆಗಳೇ ಇರಲಿಲ್ಲ.ಸಮಾಜದ ಅಸಮಾನತೆಯಿಂದ ಮಹಿಳಾ ಸ್ವಾವಲಂಬನೆಯವರೆಗೂ ಸ್ವಾಮೀಜಿಯವರು ಸಲಹೆಯನ್ನು ನೀಡಿದ್ದಾರೆ.ಇಂದಿಗೂ ಸ್ವಾಮೀಜಿಯವರು ನೀಡಿದ ಉತ್ತರಗಳು ಪ್ರಸ್ತುತವೆನಿಸುತ್ತವೆ.ಸ್ವಾಮೀಜಿಯವರ ೧೫೦ನೇ ಜಯಂತಿಯ ಈ ಸಂದರ್ಭದಲ್ಲಿ ನಾವು ಅವರಿಗೆ ಸಲ್ಲಿಸುವ ಗೌರವದ ಕಾಣಿಕೆಯೆಂದರೆ ಅದು ಅವರ ಆದರ್ಶಗಳನ್ನು ಪಾಲಿಸುವುದು.ಸ್ವಾಮೀಜಿಯವರು ಹುಟ್ಟಿದ ಈ ದೇಶದ ಯುವಜನತೆ ತಪ್ಪು ದಾರಿ ಹಿಡಿಯುತ್ತದೆ,ಸಣ್ಣ ಕಾರಣಗಳಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತದೆ ಎಂದರೆ ನಾವು ಅವರ ಆದರ್ಶಗಳನ್ನು ಗಾಳಿಗೆ ತೂರಿದ್ದೇವೆ ಎಂದೇ ಅರ್ಥ.ಸ್ವಾಮೀಜಿಯವರ ಕನಸಿನ ಭಾರತ ನಿರ್ಮಾಣಮಾಡುವ ಜವಾಬ್ದಾರಿ ಯುವಕರ ಮೇಲಿದೆ.ಅದನ್ನರಿತು ನಾವು ಮುನ್ನಡೆಯಬೇಕಾಗಿದೆ.

12/1/12

ಹೀಗೂ ಉಂಟೇ?


Sunday is gloomy, my hours are slumberless
Dearest the shadows I live with are numberless
Little white flowers will never awaken you
Not where the black coach of sorrow has taken you
Angels have no thought of ever returning you
Would they be angry if I thought of joining you?

Gloomy Sunday

Gloomy is Sunday, with shadows I spend it all
My heart and I have decided to end it all
Soon there'll be candles and prayers that are sad I know
Let them not weep let them know that I'm glad to go
Death is no dream for in death I'm caressing you
With the last breath of my soul I'll be blessing you

Gloomy Sunday

Dreaming, I was only dreaming
I wake and I find you asleep in the deep of my heart, here
Darling, I hope that my dream never haunted you
My heart is telling you how much I wanted you

Gloomy Sunday 
ಆತ್ಮಹತ್ಯೆ ಮಾಡಿಕೊಳ್ಳುವವರ ಹಾಡು ಎಂದೇ ಪ್ರಸಿದ್ಧಿಪಡೆದಿರುವ ಹಂಗೇರಿಯನ್ ಕವಿ ರಚಿಸಿರುವ ಹಾಡು. 

10/1/12

ನಿತ್ಯ ರಮಣೀಯ ಆಗುಂಬೆ


ಶಿವಮೊಗ್ಗೆಯಲ್ಲಿ ಆಗಸ್ಟ್ ನಲ್ಲಿ ಸುರಿಯುವ ಮಳೆ ಉತ್ತರ ಕರ್ನಾಟಕದ ಈಡಿ ವರ್ಷದ ಮಳೆಗೆ ಸಮ ಎಂದರೆ ಉತ್ಪ್ರೇಕ್ಷೆ ಆಗಲಾರದು.ಅಂತಹ ಶಿವಮೊಗ್ಗದವನಾದ ನನಗೆ ಮಳೆಯೆಂದರೆ ಅಂತಹ ವಿಶೇಷವಾದ ಅಸಕ್ತಿಯೇನು ಇಲ್ಲ.ಆದರೆ ಅಂತಹುದೇ ಒಂದು ಆಗಸ್ಟ್ ನಲ್ಲಿ ಅದೇ ಮಳೆಯನ್ನು ದಿನಗಟ್ಟಲೇ ನೋಡಲು ಆಗುಂಬೆಯಲ್ಲಿ ಬಂದು ಕುಳಿತಿದ್ದೆ.ನನ್ನ ಅಜ್ಜನ ಮನೆ ಕುಂದಾಪುರದಲ್ಲಿ ಇದ್ದದ್ದರಿಂದ ಬೇಸಿಗೆಯಲ್ಲಿ ಸದಾ ನಾನು ಅಲ್ಲಿಗೆ ಹೋಗುತಿದ್ದೆ.ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹೋದರೆ ಕುಂದಾಪುರಕ್ಕೆ ಹೋಗಲು ಇದ್ದ ಎರಡು ಮಾರ್ಗಗಳಲ್ಲಿ ಆಗುಂಬೆ ಮಾರ್ಗವೂ ಒಂದು.ಕರ್ನಾಟಕದ ಚಿರಪೂಂಜಿ ಎಂದು ಖ್ಯಾತಿ ಪಡೆದಿದ್ದ ಆಗುಂಬೆ ಬೇಸಿಗೆ ಕಾಲವಾಗಿರುತ್ತಿದ್ದರಿಂದ ಬಿಸಿಲಿನಿಂದ ಕೂಡಿರುತಿತ್ತು.ಹಾಗಾಗಿ ಆಗುಂಬೆ ನನ್ನ ಕಣ್ಣಿಗೆ ವಿಶೇಷವಾಗಿ ಗೋಚರಿಸುತ್ತಿದ್ದದ್ದು ಕೇವಲ ಅದರ ಕಡಿದಾದ ತಿರುವುಗಳಿಂದ(ದೊಡ್ಡ ಬಸ್ ಹಾಗೂ ಲಾರಿಗಳು ಅಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ).ಆದರೆ ಅನಿರೀಕ್ಷಿತವಾಗಿ ಒಂದು ದಿನ  ಅಲ್ಲಿನ ಮಳೆಯನ್ನು ನೋಡುವ ಸೌಭಾಗ್ಯ ನನಗೆ ದೊರಕಿತ್ತು.ಯಾವುದೋ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಆಗುಂಬೆ ಮಾರ್ಗದಲ್ಲಿ ಕುಂದಾಪುರಕ್ಕೆ ಹೊರಟಿದ್ದೆವು.ಅದು ಜೂನ್ ತಿಂಗಳಾಗಿದ್ದರಿಂದ ತೀರ್ಥಹಳ್ಳಿಯಿಂದ ಮುಂದೆ ಸಂಪೂರ್ಣ ಮೋಡ ಮುಸುಕಿದ ವಾತಾವರಣವಿದ್ದಿತ್ತು.ಆಗುಂಬೆಯ ಸನಿಹಕ್ಕೆ ಬಂದ ಕೊಡಲೇ ಸುರಿಯತೊಡಗಿದ ಮುಸಲಧಾರೆ ರಸ್ತೆ ಕಾಣದಂತೆ ಮಾಡಿಹಾಕಿತ್ತು.ಡ್ರೈವರ್ ಕಾರನ್ನು ರಸ್ತೆ ಬದಿ ನಿಲ್ಲಿಸಿದರು.ಟೀ ಹೀರಲು ಅಲ್ಲೇ ಸನಿಹದಲ್ಲಿದ್ದ ಟೀ ಕಂ ಬೋಂಡ ಸೆಂಟರಿಗೆ ಹೋದೆವು(ಆಗುಂಬೆ ಘಾಟಿ ಪ್ರವೇಶಿಸುವ ಮೊದಲು ಸಿಗುವ ಚೆಕ್ ಪೋಸ್ಟ್ ನ ಸನಿಯದಲ್ಲಿರುವ ಈ ಪುಟ್ಟ ಅಂಗಡಿ ಬಹಳ ಪ್ರಸಿದ್ಧಿ ಪಡೆದಿದೆ).ಬೋಂಡ ತಿನ್ನುತ್ತ ನಾ ಕಂಡ ದೃಶ್ಯ ವೈಭವ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿತ್ತು.ಅಲ್ಲಿಯವರೆಗೂ ಆಗುಂಬೆಯ ಬಗ್ಗೆ ನನಗೆ ಇದ್ದ ಇಮೇಜ್ ಸಂಪೂರ್ಣ ಬದಲಾದ ದಿನ ಅದು.ನಮ್ಮ ಕೆ.ಕಲ್ಯಾಣ್,ಜಯಂತ್ ಕಾಯ್ಕಿಣಿಯಂತವರು ಅಲ್ಲಿ ಇದ್ದಿದ್ದರೆ ಸಾವಿರ ಕವನಗಳು ಸೃಷ್ಟಿಯಾಗಿ ಬಿಡುತಿತ್ತೇನೋ? ಕೈಯಲ್ಲಿ ಒಂದು ಕ್ಯಾಮೆರವೂ ಇಲ್ಲದಂತೆ ಹೋಗಿದ್ದ ನಾನು ಸುಮ್ಮನೆ ನೋಡುತ್ತಾ ಕುಳಿತಿದ್ದೆ.ನಿಧಾನವಾಗಿ ಮಳೆ ಕಡಿಮೆಯಾದ ನಂತರ ನಮ್ಮ ಕಾರು ಅಲ್ಲಿಂದ ಹೊರಟಿತ್ತು.ನಂತರ ನಮಗೆ ಎದುರಾದದ್ದು ಆಗುಂಬೆಯ ಘಾಟಿ.ಪ್ರತಿಯೊಬ್ಬ ಪ್ರಕೃತಿಪ್ರಿಯನು ಒಮ್ಮೆಯಾದರು ನೋಡಲೇಬೇಕಾದ ದೃಶ್ಯಗಳನ್ನ ಅದು ಕಟ್ಟಿಕೊಡುತ್ತದೆ.ಮಳೆಯಿಂದ ತೋಯ್ದು ಹೋಗಿದ್ದ ರಸ್ತೆ,ಮಳೆ ನೀರನ್ನು ಇನ್ನು ಜಿನುಗುತಿದ್ದ ಮರ-ಗಿಡಗಳು,ಸುತ್ತಲೂ ಇದ್ದ  ಹಚ್ಚಹಸಿರು ಕಣ್ಮನ ತಣಿಸುತಿತ್ತು.ಸ್ವಲ್ಪ ಬೆಟ್ಟದಿಂದ ಕಣ್ಣು ಕೆಳಗೆ ಹಾಯಿಸಿದರೆ ಕಾಣುವ ದೃಶ್ಯ ಸೊಬಗು ಇನ್ನೂ ಮನೋಹರ.ಮಳೆಯ ಕಾರಣ ಅದರ ಚೆಲುವು ಇಮ್ಮಡಿಸಿತ್ತು.ಹತ್ತಿರದಲ್ಲೇ ಹರಿಯುವ ಸೀತಾ ನದಿ ನಮಗೆ ಅಲ್ಲಿ ಕಾಣುತ್ತದೆ.ಘಟ್ಟ ಇಳಿಯುವಾಗ ಅಲ್ಲಲ್ಲಿ ಮಳೆಗಾಲದಲ್ಲಿ ಕಾಣಸಿಗುವ ಜಲಪಾತಗಳು ನಿಜಕ್ಕೂ ಕಣ್ಣಿಗಿಂಪು ನೀಡುತ್ತದೆ.ನನಗಂತೂ ಅಲ್ಲಿಂದ ಕಾಲ್ತೆಗೆಯುವ ಇಷ್ಟವೇ ಇರಲಿಲ್ಲ.ಆದರೆ ಅಲ್ಲಿಂದ ಹೊರಡಲೇ ಬೇಕಾಯಿತು.ಅದಾದ ನಂತರ ಹಲವಾರು ಬಾರಿ ಕೇವಲ ಮಳೆ ನೋಡಲೆಂದೇ ಅಲ್ಲಿಗೆ ಹೋಗಿದ್ದೇನೆ.ಹತ್ತಿರದಲ್ಲೇ ಇರುವ ಸೀತಾನದಿ ನಿಸರ್ಗಧಾಮಕ್ಕೂ ಹೋಗಿ ಬಂದಿದ್ದಿದೆ.ರಾಫ್ಟಿಂಗ್  ಮಾಡುವ ಹವ್ಯಾಸ ಇರುವವರು ಅಲ್ಲಿಗೆ ಹೋಗಲೇಬೇಕು.ಇದಲ್ಲದೇ ಆಗುಂಬೆಯ ಪ್ರಸಿದ್ಧಿಗೆ ಇನ್ನೂ ಅನೇಕ ಕಾರಣಗಳಿವೆ.ಆಗುಂಬೆ ನೋಡುವುದಕ್ಕೆ ಎಷ್ಟು ಸೊಬಗನ್ನು ಹೊಂದಿದೆಯೋ, ಅಷ್ಟೇ ಜೀವ ವೈವಿಧ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ.ಕಾಳಿಂಗ ಸರ್ಪದ ಪ್ರಾಕೃತಿಕ ವಾಸ ಸ್ಥಳ ಆಗುಂಬೆ.ಅನೇಕ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಪ್ರಾಣಿಗಳು ಇಲ್ಲಿ ನೋಡಸಿಗುತ್ತವೆ.ಹಾಗಾಗಿಯೇ ಅನೇಕ ಸಂಶೋಧನಾ ಕೇಂದ್ರಗಳು ಇಲ್ಲಿವೆ.ಅನೇಕ ಅಪರೂಪದ ಔಷಧೀಯ ಸಸ್ಯಗಳು ಇಲ್ಲಿ ಸಿಗುತ್ತವೆ.ಆಗುಂಬೆಯ ಇನ್ನೊಂದು ಹಿರಿಮೆ ಆಗುಂಬೆಯಲ್ಲಿ ಕಾಣುವ ಸುಂದರ ಸೂರ್ಯಾಸ್ತಮಾನ.ಸಂಜೆಯ ಆಗುಂಬೆಯ ಸುಂದರ ವಾತವರಣದಲ್ಲಿ ಕೆಂಬಣ್ಣದ ಸೂರ್ಯ ಅಸ್ತಮಾನವಾಗುವುದನ್ನು ನೋಡಲು ಎರಡು ಕಣ್ಣು ಸಾಲದು.ಇಲ್ಲಿಗೆ ಕ್ಯಾಮೆರ ಇಲ್ಲದೇ ಬರುವುದು ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆಯೇ ಸರಿ.
ಸರಿ ಇನ್ನೇನು ಮುಂದಿನ ಮಳೆಗಾಲದಲ್ಲಿ ಹೊರಡಿಆಗುಂಬೆಯ ಕಡೆಗೆ.ಮರೆಯದಿರಿ ಕ್ಯಾಮೆರಾದೊಂದಿಗೆ!










ಬೆಂಚಿನ ಮೇಲೊಂದು ಕವನ


ಹೀಗೊಂದು ದಿನ ಸುಮ್ಮನೆ ಮಲಗಿದ್ದೆ 
ನಿನ್ನ ನೆನಪಾಯಿತು..
ಅಸಲಿಗೆ ನಾ ನಿನ್ನ ಎಂದು ಮರೆತಿದ್ದೆ?
ಪ್ರಶ್ನೆಗೆ  ಮನನೊಂದಿತು..
ದೂರವಾದಷ್ಟು ಹತ್ತಿರ ನೀನು
ಹೀಗೇಕೆ ಕಾಡುತಿ?
ಹೋಗುವುದಾದರೆ ಹೋಗಿಬಿಡು 
ತಿರುಗಿಬರಬೇಡ ಮತ್ತೆ ನೆನಪಾಗಿ..
ಸಾಕೆನ್ನುವಷ್ಟು ನೋಯಿಸಿದ್ದಾಯ್ತು 
ಕಣ್ಣೀರಲ್ಲಿ ತೋಯಿಸಿದ್ದಾಯ್ತು
ಇನ್ನೇಕೆ ಕಾಡುತಿ?

ಬೇಕೆಂದರೂ ಸಿಗಲಿಲ್ಲ ಮರೆವೆಂಬ ವರ
ಭಾವನೆಗಳಿಗೆ ಬರಲಿಲ್ಲ ಎಂದಿಗೂ ಬರ ..
ನಿನ್ನ ನೆನಪೇನು ಅಗ್ಗಿಷ್ಟಿಕೆಯೇ ಸುಡುತಿಹುದು ಈ ತರದಿ
ತಂಗಾಳಿಯಾಗಲಿಲ್ಲ ನೀನೆಂದೂ, ಕಳೆಯಲಿಲ್ಲ  ಬೇಗುದಿ
ಹೋಗುವುದಾದರೆ ಹೋಗಿಬಿಡು 
ತಿರುಗಿಬರಬೇಡ ಮತ್ತೆ ನೆನಪಾಗಿ..
ನಕ್ಷತ್ರಿಕನಂತೆ ಕಾಡಿಸಿದ್ದಾಯ್ತು
ಬಿಸಿನೀರಲ್ಲಿ ಬೇಯಿಸಿದ್ದಾಯ್ತು
ಇನ್ನೇಕೆ ಕಾಡುತಿ?
ಪ್ರೀತಿ ಮಿಶ್ರಿತ ಶೋಕ ಈ ವಿರಹ..
ಇದರಾಚೆಗಿನ ನೋವು ನೂರು ತರಹ..
ನಾಲ್ಕು ಕದದ ಹೃದಯದಲ್ಲಿ ಪ್ರೀತಿ ಬರುವುದು ಎಲ್ಲಿಂದ?
ತಿಳಿದರೆ ಎಂದೆಂದಿಗೂ ಕದ ಮುಚ್ಚಿಬಿಡುವೆ ಆನಂದದಿಂದ ..

 






 

8/1/12

ನಾವು ಸೋತ ಆ ಯುದ್ಧ!


ಹೌದು ನಾನು ಹೇಳಹೊರಟಿರುವುದು ೧೯೬೨ರ ಭಾರತ-ಚೀನಾ ಯುದ್ಧದ ಬಗ್ಗೆ.ಈ ವರ್ಷದ ಅಕ್ಟೋಬರ್ ಗೆ ಸರಿಯಾಗಿ ಈ ಯುದ್ಧಕ್ಕೆ ೫೦ ವರ್ಷ ತುಂಬುತ್ತದೆ.ನಮ್ಮ ಸೈನಿಕ ಹಿಮಾಲಯದ ಕೊರಕಲಿನಲ್ಲಿ ಚೀನಿ ಸೈನಿಕರ ಗುಂಡಿಗೆ,ಹಿಮಾಲಯದ ಹೆಪ್ಪು ಗಟ್ಟಿಸುವ ಚಳಿಗೆ ಸಿಲುಕಿ ನರಳುತ್ತ ಅನಾಥ ಹೆಣವಾಗಿ ಹೋಗಿ ೫೦ ವರ್ಷವಾಗುತ್ತದೆ.ಬದುಕಿ ಉಳಿದ ಸೈನಿಕರನ್ನು ಆ ಮಂಗೋಲಿಯನ್ ಮುಖದ ಸೈನಿಕರು ಸೆರೆಹಿಡಿದು ಯುದ್ಧ ಶಿಬಿರಗಳಲ್ಲಿ ಕೂರಿಸಿ ೫೦ ವರ್ಷ ಗಳಾಗುತ್ತದೆ.ಈ ಒಂದು ಯುದ್ಧವನ್ನು ಯಾವ ಭಾರತೀಯನೂ ಮರೆತಿರಲಾರ.ಏಕೆಂದರೆ ಇದೊಂದು ಯುದ್ಧವಲ್ಲ,ಭಾರತಕ್ಕೆ ಉಂಟಾದ ಅಪಮಾನ. ಈ ಯುದ್ಧದ ಸೋಲಿನ ಕಾರಣಗಳು ಇಂದಿನ ಯುವ ಪೀಳಿಗೆಗೆ ಅಷ್ಟಾಗಿ ತಿಳಿದಿರಲಿಕ್ಕಿಲ್ಲ.ಅದನ್ನು ತಿಳಿಸುವ ಪ್ರಯತ್ನವನ್ನು ಮಾಡಿದವರೂ ತೀರ ಕಡಿಮೆ.ಇಂದಿಗೂ ೧೯೬೨ರ ಯುದ್ಧ ನಮ್ಮ ಪಾಲಿಗೆ ದೊಡ್ಡ ರಹಸ್ಯವಾಗೆ ಉಳಿದಿದೆ.ಇದಕ್ಕೆ ಸಂಬಂಧ ಪಟ್ಟ ಅನೇಕ ದಾಖಲೆಗಳು ಕಣ್ಮರೆಯಾಗಿವೆ.ಏಕೆಂದರೆ ಅವುಗಳು ದೊರೆತರೆ ನಾವು ಮಹಾ ನೇತಾರರೆಂದು  ಕೊಂಡಿರುವ ಅನೇಕ ನಾಯಕರ ಬಣ್ಣ ಬಯಲಾಗುತ್ತದೆ!
                                                 ನಾನು ಮೊದಲ ಬಾರಿಗೆ ೧೯೬೨ರ ಯುದ್ಧದ ಬಗೆಗೆ ತಿಳಿದುಕೊಂಡಾಗ ತುಂಬಾ ಅವಮಾನಿತನಾಗಿದ್ದೆ.ಒಂದು ರೀತಿಯ ಅಸಹನೆ, ಸಿಟ್ಟು ನನ್ನಲ್ಲಿ ಮೂಡಿತ್ತು.ನಾವು ಚೀನಾದ ಮುಂದೆ ದಯನೀಯವಾಗಿ ತಲೆಬಾಗಿ ನಿಲ್ಲಲು ಕಾರಣವೇನು? ಅಷ್ಟು ದುರ್ಬಲವಾಗಿತ್ತೇ ನಮ್ಮ ಸೈನ್ಯ?ಅಷ್ಟೊಂದು ಹದಗೆಟ್ಟು ಹೋಗಿತ್ತೆ ನಮ್ಮ ರಕ್ಷಣಾ ವ್ಯವಸ್ಥೆ?ಯಾರನ್ನು ಇದಕ್ಕೆ ಹೊಣೆಯಾಗಿಸಬಹುದು?ಇಂತಹ ಅನೇಕ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು.ಈ ಪ್ರಶ್ನೆಗಳಿಗೆ ನಾನು ಕಂಡುಕೊಂಡ ಉತ್ತರಗಳನ್ನು ತಿಳಿಸುವ ಒಂದು ಚಿಕ್ಕ ಪ್ರಯತ್ನವೇ ಈ ಪುಟ್ಟ ಲೇಖನಗಳು.
                       ಕಾರ್ಗಿಲ್ ಯೋಧರ ಹೆಸರುಗಳನ್ನು ಪಟ್ಟಿಮಾಡಿ ಎಂದರೆ ಸಾಕು, ಅನುಜ್ ನಾಯರ್, ಯೋಗೇಂದ್ರ ಸಿಂಗ್ ಯಾದವ್, ವಿಕ್ರಂ ಬಾತ್ರ, ಮನೋಜ್ ಕುಮಾರ್ ಪಾಂಡೆ, ಹೀಗೆ ಅನೇಕ ಹೆಸರುಗಳು ನೆನಪಿಗೆ ಬರುತ್ತದೆ.ಆದರೆ ೧೯೬೨ರ ಯುದ್ಧ ವೀರರ ಬಗ್ಗೆ ಕೇಳಿದರೆ ನಮ್ಮಲ್ಲಿ ಮೌನ ಆವರಿಸುತ್ತದೆ.ಕಾರಣ ಇಷ್ಟೇ,ಕಾರ್ಗಿಲ್ ಯುದ್ಧವನ್ನು ನಾವು ಗೆದ್ದುಕೊಂಡಿದ್ದೆವು.ಆದರೆ ೧೯೬೨ರ ಆ ಯುದ್ಧ, ನಾವು ಸರ್ವಥಾ ನೆಲಕಚ್ಚಿದ ಯುದ್ಧ.ಹಾಗಾಗಿ ನಾವು ಆ ಯುದ್ಧದಲ್ಲಿ ಸೆಣಸಾಡಿದವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಆ ಸೋತ ಯುದ್ಧದಲ್ಲೂ ನಮ್ಮ ಸೈನಿಕನ ಶೌರ್ಯ-ಸಾಹಸಗಳಿಗೇನು ಕಡಿಮೆ ಇರಲಿಲ್ಲ.ಕಾರ್ಗಿಲ್ ಯುದ್ಧ ಸೆಣಸಿದ ಯೋಧನಿಗೆ ಎಲ್ಲವೂ ಇದ್ದವು.ಆದರೆ ಹಿಮಾಲಯದ ಮಂಜಿನಲ್ಲಿ ಕಾಲಿಗೆ ಬೂಟಿಲ್ಲದೆ,ಬೆಚ್ಚನೆಯ ಉಡುಪು ಇಲ್ಲದೆ,ಕೊನೆಗೆ ಅನ್ನವೂ ಇಲ್ಲದೆ ಸಾಯಬೇಕಾದ ಪರಿಸ್ಥಿತಿಯಲ್ಲಿದ್ದನು ಆ ಸೈನಿಕ.ಚೀನಿ ಸೈನಿಕ ಎಲ್ಲ ದಿಕ್ಕಿನಲ್ಲೂ ಮುತ್ತಿಗೆ ಹಾಕುತ್ತಿದ್ದರೆ,ಅವರೆಡೆಗೆ ಹಾರಿಸಲು ಬಂದೂಕಿನಲ್ಲಿ ಗುಂಡುಗಳಿಲ್ಲದೆ ಅಸಹಾಯಕನಾಗಿ ಕುಳಿತಿದ್ದ ನಮ್ಮ ಸೈನಿಕ.ಇಂತಹ ಸ್ಥಿತಿಯಲ್ಲಿತ್ತು ಭಾರತಿಯ ಸೇನೆ..ಈ ಸ್ಥಿತಿಗೆ ನಮ್ಮ ಸೇನೆಯನ್ನು ತಂದು ನಿಲ್ಲಿಸಿದ್ದವರು ಯಾರು?ಚೀನಾ ದೇಶದಂತಹ ಬಲಾಡ್ಯ ಕಾಲು ಕೆರೆದು ಯುದ್ಧಕ್ಕೆ ಕರೆಯುತ್ತಿದ್ದಾಗ ನಮ್ಮ ಸೇನೆಯನ್ನು ಈ ಮಟ್ಟದಲ್ಲಿ ಸಜ್ಜುಗೊಳಿಸಿದ ಆ ನೇತಾರ ಯಾರು? ಈ ಪ್ರಶ್ನೆಯ ನಿಜವಾದ ಉತ್ತರ ಅದೆಂದೋ ಇತಿಹಾಸದಲ್ಲಿ ಕಳೆದುಹೋಗಿದೆ.ಆದರೆ ಹೊಣೆಗಾರನಾಗಿದ್ದು,ಅವಮಾನಿತನಾಗಿದ್ದು ಮಾತ್ರ ಅಂದಿನ ನಮ್ಮ ಸೈನಿಕ.
                       ಯಾವುದೇ ಒಂದು ಯುದ್ಧ ಕೇವಲ ಸೈನಿಕರ ಬಲದ ಮೇಲೆ ನಿಂತಿರುವುದಿಲ್ಲ.ಎರಡು ದೇಶಗಳ ರಾಜಕೀಯ ಪರಿಸ್ಥಿತಿ,ಉಭಯ ದೇಶಗಳ ನಾಯಕರ ಮನಸ್ಥಿತಿಯ ಮೇಲೆ ಅದು ಅವಲಂಬಿತವಾಗಿರುತ್ತದೆ.ನಮ್ಮ ಸಿದ್ಧತೆಗಳು ಬಹು ಮುಖ್ಯ ಪಾತ್ರವಹಿಸುತ್ತದೆ.೧೯೬೨ರ ಯುದ್ಧದಲ್ಲಿ ಎರಡು ದೇಶಗಳ ಸಿದ್ಧತೆ ಹೇಗಿತ್ತು ಎಂಬುದರ ಬಗ್ಗೆ ಒಂದು ಸಣ್ಣ ವಿವರಣೆ ಅವಶ್ಯಕ ಎಂಬುದು ನನ್ನ ಅನಿಸಿಕೆ.ಹಾಗಾಗಿಯೇ  ಯುದ್ಧ ಸಿದ್ಧತೆಯ ಬಗ್ಗೆ ಒಂದಿಷ್ಟು ಹೇಳಲಿದ್ದೇನೆ.ಅದಕ್ಕೂ ಮೊದಲು ಯುದ್ಧ ಹಿನ್ನಲೆಯ ಕುರಿತು ಒಂದಿಷ್ಟು ಹೇಳುವುದಿದೆ.
ಯುದ್ಧದ ಹಿನ್ನೆಲೆ:
ಭಾರತ ಬ್ರಿಟೀಷ್ ಆಡಳಿತದಲ್ಲಿದ್ದಾಗಿನಿಂದ ಚೀನಾ ಟಿಬೆಟ್ ಮೇಲೆ ತನ್ನ ಹಿಡಿತ ಸಾಧಿಸಲು ಹವಣಿಸುತ್ತಿತ್ತು.ಇತಿಹಾಸವನ್ನೊಮ್ಮೆ ಗಮನಿಸಿದರೆ ಚೀನಾ ಅನೇಕ ಬಾರಿ ಟಿಬೆಟ್ ಮೇಲೆ ದಂಡೆತ್ತಿ ಹೋದದ್ದನ್ನು ಕಾಣಬಹುದು.ಅತ್ಯಂತ ಆಯಕಟ್ಟಿನ ಸ್ಥಳದಲ್ಲಿದ್ದ ಟಿಬೆಟ್ ಮೇಲೆ ಹಿಡಿತ ಸಾದಿಸುವುದು ಚೀನಾಗೆ ಅನಿವಾರ್ಯವಾಗಿತ್ತು.ಆದರೆ ಬ್ರಿಟೀಶ್ ಸರಕಾರ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.ಬ್ರಿಟೀಷರ ಮುಂದೆ ಬಾಲ ಬಿಚ್ಚಲಾಗದೆ,ಚೀನಾ ತೆಪ್ಪಗೆ ಇತ್ತು.ಬ್ರೀಟಿಷರಿಂದ ನಾವು ಸ್ವತಂತ್ರ ಪಡೆದ ಮರುದಿನದಿಂದಲೇ ಚೀನಾ ಟಿಬೆಟನ್ನು ಆಕ್ರಮಿಸಲು ತಂತ್ರಗಳನ್ನ ಹೆಣೆಯಲು ಶುರುವಿಟ್ಟುಕೊಂಡಿತು.ಅಂತಿಮವಾಗಿ ೧೯೫೦ ಅಕ್ಟೋಬರ್ ೭ ಚೀನಾ ಟಿಬೆಟನ್ನು ವಶಪಡಿಸಿಕೊಂಡಿತು.ಅನಾಮತ್ತಾಗಿ ಟಿಬೆಟ್ ಹತ್ತಿಕುಳಿತ ಚೀನಿಗಳಿಗೆ ಬಹುಸುಲಭವಾಗಿ ವಶವಾಗುವ ಸ್ಥಿತಿಯಲ್ಲಿತ್ತು ಭಾರತದ ಪೂರ್ವ ಗಡಿಭಾಗಗಳು.ಆದರೆ ತಕ್ಷಣಕ್ಕೆ ಯುದ್ಧಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ ಚೀನಾ.ಕೊರಿಯಾದಂತಹ ನೆರೆ ರಾಷ್ಟ್ರದೊಂದಿಗೆ ಯುದ್ಧಮಾಡುತ್ತಿದ್ದ ಚೀನಾ ಆರ್ಥಿಕವಾಗಿ ದುಸ್ಥಿತಿಯಲ್ಲಿತ್ತು.ಅಲ್ಲದೇ ವಿಶ್ವಮಟ್ಟದಲ್ಲಿ ಚೀನಾಗೆ ಭಾರತದ ಸಹಾಯ ಅಗತ್ಯವಾಗಿತ್ತು.ಅದ್ದರಿಂದ ಚೀನಾ ನಮ್ಮೊಂದಿಗೆ ಸ್ನೇಹವನ್ನು ಮುಂದುವರಿಸುವ ನಾಟಕವಾಡಿತ್ತು.
                                 ಇತ್ತ ಭಾರತದಲ್ಲಿ  ಚೀನಾ ,ಟಿಬೆಟ್ ಮೇಲೆ ಆಕ್ರಮಣ ಮಾಡಿದ್ದರ ಪರ-ವಿರೋಧ ಚರ್ಚೆಗಳು ಪ್ರಾರಂಭವಾದವು.ಕಮ್ಯುನಿಸ್ಟರು ಚೀನಾ ಧೋರಣೆಯನ್ನು ಬೆಂಬಲಿಸಿದರೆ,ಬಲ ಪಂಕ್ತೀಯರು ಇದನ್ನು ವಿರೋಧಿಸಿದ್ದರು.ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರು ಚೀನಾದೊಂದಿಗೆ ಯುದ್ಧ ನಡೆದೇ ಹೋಗಲಿ ಎಂದುಬಿಟ್ಟಿದ್ದರು.ಅವರು ಹೇಳಿದಂತೆ ನಡೆದಿದ್ದರೆ ನಮ್ಮ ಇತಿಹಾಸ ಬೇರೆಯೇ ಹಾಗಿಬಿಡುತಿತ್ತೇನೋ, ಆದರೆ ನಮ್ಮ ದುರ್ದೈವವೋ ಏನೋ  ಮಹಾನಾಯಕ,ದೇಶದ ಕಣ್ಮಣಿ,ತನ್ನನ್ನು ತಾನು ಮಹಾ ಶಾಂತಿದೂತ ಎಂದು ಭಾವಿಸಿದ್ದ ನೆಹರು ಇದಕ್ಕೆ ಆಸ್ಪದ ನೀಡಲಿಲ್ಲ.ಕೊನೆಗೆ ಸಣ್ಣವಿರೋಧವನ್ನೂ ತೋರಿಸದೆ ಭಾರತ ಸುಮ್ಮನಾಗಿಬಿಟ್ಟಿತ್ತು.ನಮ್ಮಂತಹ ನೆರೆ ರಾಷ್ಟ್ರವೇ ಸುಮ್ಮನಿದ್ದ ಮೇಲೆ ಟಿಬೆಟ್ ನ ಪಾಡು ಕೇಳುವವರೇ ಇಲ್ಲದಂತಾಗಿತ್ತು.ಚೀನಾ ಅನಾಯಾಸವಾಗಿ ನಮ್ಮ ಹೆಬ್ಬಾಗಿನಲ್ಲಿ ಬಂದು ಕುಳಿತಿತ್ತು.ಪಾಪದ ಟಿಬೆಟ್ ನೆಲದಲ್ಲಿ ಬಂದು ಕುಳಿತಿತ್ತು ಡ್ರಾಗನ್. 
ಚೀನಾ ಸಿದ್ಧತೆ:

ಟಿಬೆಟಿನಲ್ಲಿ ಚೀನಾ ಬಂದು ಕುಳಿತಿದ್ದ ಸಮಯದಲ್ಲಿ ಚೀನಾದ ಅರ್ಥಿಕ ಸ್ಥಿತಿ ಹದಗೆಟ್ಟಿತ್ತು.ಆದರೂ ಅಂತಹ ಸಂದರ್ಭದಲ್ಲಿಯೂ ಚೀನಾ ಸುಮ್ಮನೆ ಕೂಡಲಿಲ್ಲ.ಅದು ಮುಂದೆಂದೋ ತಾನು ಭಾರತದೊಟ್ಟಿಗೆ ಮಾಡಬೇಕಾದ ಯುದ್ದದ ಸಿದ್ಧತೆಗಳನ್ನ ಅಂದೇ ಮಾಡತೊಡಗಿತ್ತು.ಸುಸ್ಸಜ್ಜಿತವಾದ ರಸ್ತೆಗಳನ್ನ ತನ್ನ ಗಡಿಭಾಗಗಳಲ್ಲಿ ಹಾಕಿಕೊಂಡಿತು.ಟಿಬೆಟಿನಲ್ಲಿ ರೈಲು ಹಳಿಹಾಕುವ ಕೆಲಸ ಶುರುವಿಟ್ಟು ಕೊಂಡಿತು.ತನ್ನ ಸೇನೆಯನ್ನ ಗಡಿಯುದ್ದಕ್ಕೂ ನಿಯೋಜಿಸಿತು.ಆದರೂ ೧೯೫೪ರಲ್ಲಿ ಭಾರತದೊಟ್ಟಿಗೆ "ಪಂಚಶೀಲ" ಒಪ್ಪಂವನ್ನು ಮಾಡಿಕೊಂಡಿತು.ಆಗ ಶುರುವಾದದ್ದೇ ಹಿಂದಿ-ಚೀನಿ ಭಾಯಿ ಭಾಯಿ ಎಂಬ ನಾಟಕ.ಇಷ್ಟೆಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡ ಚೀನಾ ತಾನು ಅನಿವಾರ್ಯವಾಗಿ ಮಾಡಿಕೊಂಡ ಒಪ್ಪಂದವನ್ನು ಮುರಿಯಲು ಒಂದು ಸಣ್ಣ ಕಾರಣವನ್ನು ಹುಡುಕುತಿತ್ತು.೧೯೫೯ರಲ್ಲಿ ಆ ಕಾರಣವೂ ಸಿಕ್ಕಿಹೋಯಿತು.ಟಿಬೆಟಿನಿಂದ ಪರಾರಿಯಾಗಿ ಬಂದ ಟಿಬೆಟ್ ಧರ್ಮಗುರು ಅರ್ಥಾತ್ ದಲೈಲಾಮ ಭಾರತದಲ್ಲಿ ಆಶ್ರಯವನ್ನು ಪಡೆದುಕೊಂಡ.ಆಗಲೇ ಚೀನಾ ತನ್ನ ಭಾಯಿ ಭಾಯಿ ಮುಖವಾಡವನ್ನು ಕಳಚತೊಡಗಿತು.ಭಾರತದ ಗಡಿಯೊಳಗೆ ಅಲ್ಲಲ್ಲಿ ತನ್ನ ಸೈನಿಕರನ್ನು ನುಗ್ಗಿಸಿ ಧಾಂದಲೆ ಎಬ್ಬಿಸಿತು.ಅಸಲಿಗೆ ಭಾರತ ಚೀನಾದ ನಡುವೆ ಸರಿಯಾದ ಗಡಿಗಳೇ ಇರಲಿಲ್ಲ.ಬ್ರಿಟೀಷರು ನಮಗೆ ನೀಡಿದ  ಮ್ಯಾಪ್ ನ್ನು(ಮ್ಯಾಕ್ ಮೋಹನ್ ಲೈನ್ ಎಂಬ ಅಗೋಚರ ಗಡಿರೇಖೆ ಅನ್ವಯ )   ನಾವು ಹಿಡಿದು ಕೊತಿದ್ದರೆ, ಅತ್ತ ಚೀನಾ ಬೇರೆಯದೇ ಮ್ಯಾಪ್ ಬರೆಯುತ್ತ ಕುಳಿತಿತ್ತು.ತನ್ನ ಹಿಡಿಸೈನ್ಯವನ್ನೇ ನವೀಕರಿಸಿಕೊಂಡಿತ್ತು ಚೀನಾ.
ಭಾರತದ ಸಿದ್ಧತೆ: 
ಅತ್ತ ಚೀನಾ ಇಷ್ಟೆಲ್ಲಾ ಮಾಡುತ್ತಿದ್ದಾಗ ಭಾರತದ ಸರ್ಕಾರ ಏನು ಮಾಡುತಿತ್ತು ಗೊತ್ತೇ,ನಿದ್ದೆ.ತನ್ನ ಗಡಿಯಾಚೆಗೆ ಇಷ್ಟೆಲ್ಲಾ ನಡೆಯುತ್ತಿದ್ದಾಗ ಚೀನಾದ ಮೇಲೆ ಒಂದು ಸಣ್ಣ ಅನುಮಾನದ ಕಣ್ಣನ್ನೂ ನೆಡದೆ  ಸುಮ್ಮನೆ ಕುಳಿತಿತ್ತು ನಮ್ಮ ಸರಕಾರ.ಚೀನಾ ದೊಂದಿಗಿನ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಲಿಲ್ಲ.ಗಡಿಯ ಬಗ್ಗೆ ಇದ್ದ ಗೊಂದಲಗಳನ್ನು ನಿಭಾಯಿಸಿಕೊಳ್ಳಲಿಲ್ಲ.ಕೊನೆಗೆ ತನ್ನ ಸೇನೆಯನ್ನು ಚೀನಾದ ಮೇಲೆ ಯುದ್ಧ ಮಾಡಿ ಗೆಲ್ಲುವ  ಮಟ್ಟಿಗೆ ಅಲ್ಲದೆ ಹೋದರೂ,ಪ್ರತಿರೋಧ ಒಡ್ಡುವಷ್ಟರ ಮಟ್ಟಿಗೂ ಸನ್ನದ್ಧಗೊಳಿಸಲಿಲ್ಲ.ನೆಹರು ತನ್ನ ರಾಜಕೀಯ ಲಾಲಸೆಗಳನ್ನ ತೀರಿಸಿಕೊಳ್ಳುತ್ತ ಸಾಗಿದರು.ಬ್ರೀಟಿಷರ ಕಾಲದಲ್ಲಿ ಬಲಿಷ್ಠವಾಗಿದ್ದ ಭಾರತೀಯ ಸೇನೆಯನ್ನು ಅಧೋಗತಿಗೆ ತಂದು ನಿಲ್ಲಿಸಿದ್ದರು.ಯಾವುದೋ ಜಮಾನದ ಬಂದೂಕುಗಳನ್ನ ಹಿಡಿದು ಕುಳಿತಿತ್ತು ನಮ್ಮ ಸೇನೆ.ಚೀನಾ ಚಟುವಟಿಕೆಗಳನ್ನ ಕಂಡು ಸೇನೆಯ ಕೆಲವು ಉನ್ನತ ಅಧಿಕಾರಿಗಳು ನೆಹರುರನ್ನ ಎಚ್ಚರಿಸಿದರು.ಈ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ನೆಹರು ತೀರ ಬೇಜವಾಬ್ದಾರಿಯಾಗಿ ನಡೆದು ಕೊಂಡರು.ತಾವಾಯಿತು ತಮ್ಮ ಭಾಷಣಗಳಾಯಿತು ಎಂದು ಸುಮ್ಮನಿದ್ದು ಬಿಟ್ಟಿದ್ದರು.ಕೊನೆಗೆ ಅದಕ್ಕೆ ದೊಡ್ಡ ಬೆಲೆ ತೆರುವ ಕಾಲವೂ ಬಂದಿತ್ತು.
 ಯುದ್ಧರಂಗ:
ಅಲ್ಲಿಯವರೆಗೂ ಸುಮ್ಮನಿದ್ದ ಚೀನಾ,1959 ರಲ್ಲಿ ಭಾರತದ ೫೦೦೦೦ ಚದರ ಮೈಲಿಗಳನ್ನು ತನಗೆ ಬಿಟ್ಟುಕೊಡುವಂತೆ ಸ್ಪಷ್ಟವಾಗಿ ಕೇಳಿತ್ತು.ಇದು ದೇಶದೆಲ್ಲೆಡೆ ಕೋಲಾಹಲವನ್ನ ಹುಟ್ಟುಹಾಕಿತು.ಒತ್ತಡಕ್ಕೆ ಸಿಲುಕಿದ ನೆಹರು ಒಂದು ದೊಡ್ಡ ತಪ್ಪನ್ನು ಎಸಗಿಬಿಟ್ಟರು.ಅದೇ "ಫಾರ್ವರ್ಡ್ ಪಾಲಿಸಿ".ಗಡಿಯ ಅಂಚಿನ ಉದ್ದಗಲಕ್ಕೂ ತನ್ನ ಪೋಸ್ಟ್ ಗಳನ್ನ ಸ್ಥಾಪಿಸುವಂತೆ ಆದೇಶ ನೀಡಿದ್ದರು.ಅಂತಹ ಪೋಸ್ಟುಗಳನ್ನು ಸ್ಥಾಪಿಸುವಷ್ಟುಸೇನೆಯನ್ನು ಈ ಕೆಲಸಕ್ಕೆ ನಿಯೋಜಿಸಿರಲಿಲ್ಲ.ಸಣ್ಣ ಸಂಖ್ಯೆಯ ಭಾರತ ಸೇನೆಯ ೭ ನೆಯ ಬ್ರಿಗೇಡನ್ನು ಈ ಕೆಲಸಕ್ಕೆ ಅಚ್ಚಲಾಯಿತು.ಈ ರೀತಿ ತೆರೆಯಲಾದ ಪೋಸ್ಟುಗಳಲ್ಲಿ ಇದ್ದದ್ದು ಕೆಲವೇ ಕೆಲವು ಸೈನಿಕರು.ಏಕಕಾಲದಲ್ಲಿ ಚೀನಾ ತನ್ನ ಸೈನಿಕರನ್ನು ಎತ್ತರದ ಶಿಖರಗಳಿಂದ ಇಳಿಸಿದರೆ,ಈ ಪೋಸ್ಟುಗಳ ಕ್ಷಣ ಮಾತ್ರದಲ್ಲಿ ಅವರ ವಶವಾಗುತಿದ್ದವು.ಇಂತಹ ಅತ್ಯಂತ ಅವೈಜ್ಞಾನಿಕವಾದ ನಿರ್ಧಾರವನ್ನು ಕೈಗೊಂಡ ಭಾರತ ಸರ್ಕಾರ ೧೯೬೨ ಅಕ್ಟೋಬರ್ ನಲ್ಲಿ ತನ್ನ ಇಡೀ ಬ್ರಿಗೇಡ್ ನಾಶವಾಗಲು ಕಾರಣವಾಯಿತು.೧೯೬೨ ಅಕ್ಟೋಬರ್ ೮ ರಂದು ಶುರುವಾದ ಚೀನಿ ದಾಳಿಗೆ ಸಿಕ್ಕ ಆ ಬ್ರಿಗೇಡ್ ಕೆಲವೇ ದಿನಗಳಲ್ಲಿ ನಾಶವಾಯಿತು.೧೯೬೨ರಲ್ಲಿ ನಿಜವಾಗಲು ಭಾರತ ದೊಡ್ಡ ಪ್ರತಿರೋಧವನ್ನು ಒಡ್ಡಿದ್ದು ವಲೊಂಗ್ ಪ್ರಾಂತ್ಯದಲ್ಲಿ.ಅಕ್ಷರಶಃ ಚೀನಾ ಸೈನ್ಯವನ್ನ ಹಿಮ್ಮೆಟಿಸಿತು ಭಾರತ ಸೇನೆಯ ಕೆಲವು ತುಕಡಿಗಳು.ಇಂತಹ ಕೆಲವು ಪ್ರತಿರೋಧಗಳನ್ನು ಬಿಟ್ಟರೆ,ಭಾರತ ಈ ಯುದ್ಧವನ್ನ ಹೀನಾಯವಾಗಿ ಸೋತುಹೋಗಿತ್ತು.ಹಾಗೆಂದ ಮಾತ್ರಕ್ಕೆ ನಮ್ಮ ಸೈನಿಕರನ್ನ ಸೋಲಿಗೆ ಹೊಣೆಯನ್ನಾಗಿಸಬಹುದೇ ?ಖಂಡಿತ ಇಲ್ಲ.ಇದಕ್ಕೆ ಹೊಣೆಯನ್ನಾಗಿಸಬಹುದಾದ  ಏಕೈಕ ವ್ಯಕ್ತಿ ನೆಹರು.ಮೆನನ್ ನಂತಹ ತಲೆತಿರುಕ ವ್ಯಕ್ತಿಗೆ ದೇಶದ ರಕ್ಷಣೆಯ ಅಮೂಲ್ಯವಾದ ಜವಾಬ್ದಾರಿಯನ್ನು ಹೊರಿಸಿ ದೇಶವಿದೇಶಗಳಲ್ಲಿ ಭಾಷಣ ಬಿಗಿಯುತ್ತ ತಿರುಗಾಡಿದ ನೆಹರು ಇದಕ್ಕೆಲ್ಲ ಹೊಣೆ.ಫಾರ್ವರ್ಡ್ ಪಾಲಿಸಿ ಎಂಬ ತಿಕ್ಕಲು ಉಪಾಯವನ್ನು ಮೆನನ್ ಎಂಬ ಸಚಿವ ಸೇರಿದಂತೆ ಕೆಲವು ಸೇನಾ ನಾಯಕರ ಸಲಹೆಯ ಮೇರೆಗೆ ಹಿಂದುಮುಂದು ಯೋಚಿಸದೆ ಜಾರಿಗೆತಂದರು.ಧೋಲಾ ಪೋಸ್ಟ್ ಎಂಬ ಅತ್ಯಂತ ದುರ್ಗಮ ಹಾಗೂ ಶತ್ರು ಸೈನಿಕರಿಗೆ ಅನಾಯಾಸವಾಗಿ ದೊರಕುವ ಸ್ಥಳದಲ್ಲಿ ನಿಯೋಜಿಸಿದ ಸೇನೆಗೆ ಕನ್ನಡಕ,ಬೆಚ್ಚಗಿನ ಉಡುಪು ದೊರಕಿಸಲಿಲ್ಲ.ಕಡೇಪಕ್ಷ ಹಸಿವನ್ನು ನಿಗಿಸಿಕೊಳ್ಳಲು ಸಹ ಸರಿಯಾದ ವ್ಯವಸ್ಥೆ ಇರಲಿಲ್ಲ,ಹಾರಿಸಲು ಸರಿಯಾದ ಪ್ರಮಾಣದಲ್ಲಿ ಮದ್ದು-ಗುಂಡುಗಳಿರಲಿಲ್ಲ .ಈ ರೀತಿ ನಮ್ಮ ಸರ್ಕಾರ ನಡೆಸಿಕೊಂಡರೆ,ಅತ್ತ ಚೀನಾ ಯೋಧ ಎಲ್ಲವನ್ನು ಪಡೆದು ಬಂದು ಕುಳಿತಿದ್ದ.ಆದರೆ  ನಮ್ಮ ಸೈನಿಕನ ಧೈರ್ಯ ಸಾಹಸಗಳಿಗೆ ಆತನ ಹಸಿವು ಅಡ್ಡ ಬರಲೇ ಇಲ್ಲ.ಹಿಮಾಲಯದ ಕೊರೆಯುವ ಚಳಿಗೂ ಅದನ್ನ ಅಡಗಿಸುವ ಶಕ್ತಿ ಇರಲಿಲ್ಲ.ಆತ ತನ್ನ ಕಡೆಯ ಉಸಿರಿನ ವರೆಗೂ ಹೋರಾಟ ಮಾಡಿದ.ಸಾಧ್ಯವಾದಷ್ಟು ಚೀನಿ ಸೈನಿಕರನ್ನು ಕೊಂದು ಕೆಡವಿದ.ಅಂತಹ ಒಬ್ಬ ಸಾಹಸಿಯ ಕಥೆ ನಾನಿಲ್ಲಿ ಹೇಳಲೇ ಬೇಕಾಗಿದೆ.ಆತನ ಹೆಸರು ಸಿಪಾಯಿ ಜಸ್ವಂತ್ ಸಿಂಗ್.ಸೇಲಾ ಶಿಖರದಲ್ಲಿ ಕಾವಲು ಕಾಯುತಿದ್ದ ಈತ ಅದೆಂತಹ ಯುದ್ಧ ಸಂಘಟಿಸಿದನೆಂದರೆ ಈತನ ಪೋಸ್ಟಿಗೆ ಲಗ್ಗೆ ಹಾಕಿದ ಸುಮಾರು ೮೦ ಚೀನಿ ಸೈನಿಕರನ್ನು ಕೆಲವೇ ಜನರಿದ್ದ ತನ್ನ ತಂಡದೊಂದಿಗೆ ಎದುರಿಸಿದನು.ಕೊನೆಗೆ ಆತನ ಇಡೀ ತಂಡ ನಿರ್ನಾಮವಾಯಿತು.ಆದರೂ ಏಕಾಂಗಿಯಾಗಿ ನುಗ್ಗಿ ಬರುತ್ತಿದ್ದ ಚೀನಿ ಸೈನಿಕರನ್ನು ಬಲಿ ತೆಗೆದುಕೊಂಡನು.ಸುಮಾರು ೪೦ ಜನ ಚೀನಿಗಳನ್ನು ಒಬ್ಬಂಟಿಯಾಗಿ ಸಾಯಿಸಿದ ಆತ ಕೊನೆಗೆ ತೀವ್ರವಾದ ರಕ್ತಸ್ರಾವದಿಂದ ಕೊನೆಯುಸಿರೆಳೆದನು.ಆತನ ಶವ ದೊರಕಲಿಲ್ಲ.ಇಂದಿಗೂ ಆತ ಜೀವಂತವಾಗಿದ್ದಾನೆ ಎಂದು ಭಾವಿಸುವ ನಮ್ಮ ಸೈನಿಕರು ಅವನಿಗಾಗಿ ಅಲ್ಲಿ ರಾತ್ರಿ ಮಲಗಲು ಮಂಚವನ್ನು ಸಿದ್ದಪಡಿಸುತ್ತಾರೆ.ಹಾಗೂ ಆತನಿಗಾಗಿ ಊಟ ಬಡಿಸುತ್ತಾರೆ.ಈಗಲೂ ಆತನ ಹೆಸರ ಹಿಂದೆ ದಿವಂಗತ ಎಂಬುದನ್ನು ಸೇರಿಸುವುದಿಲ್ಲ.ಅಲ್ಲಿನ ಸ್ಥಳೀಯರು ಆತನನ್ನು "ಕ್ಯಾಪ್ಟನ್ ಸಾಹಿಬ್" ಎಂದು ಕರೆಯುತ್ತಾರೆ.ಇಂತಹ ಅನೇಕ ಸಾಹಸ ಗಾಥೆಗಳು ನಮ್ಮ ಮುಂದೆ ಇವೆ.ಆದರೆ ಒಂದು ಸರ್ಕಾರದ ದೊಡ್ಡ ಅಜಾಗರೂಕತೆಯಿಂದ ಸೋತ ಯುದ್ಧ,ಇಂತಹ ಅನೇಕರ ಸಾಹಸಗಳು ನಮ್ಮ ಗಣನೆಗೆ ಬಾರದಂತೆ ತಡೆಯಿತು.ಒಬ್ಬ ಸೈನಿಕನಿಗೆ ನ್ಯಾಯವಾಗಿ ದೊರಕಬೇಕಾದ ಸಾವು ದೊರಕಲಿಲ್ಲ ಆ ನಮ್ಮ ಸೈನಿಕರಿಗೆ.ಎದುರಾಳಿಗಳ ಗುಂಡಿಗೆ ಬಲಿಯಾದರೆ ಅದು ಒಬ್ಬ ಸೈನಿಕನಿಗೆ ಗೌರವ ತರುವಂತಹದ್ದು.ಆದರೆ ನಮ್ಮ ಸೈನಿಕ ಹೆಚ್ಚಾಗಿ ಸತ್ತದ್ದು ಹಸಿವಿಗೆ ಹಾಗೂ ಭಯಾನಕ ಚಳಿಗೆ.ಈ ಯುದ್ಧದಲ್ಲಿ ೭ ನೇ ಬ್ರಿಗೇಡ್ ನ ಪಾತ್ರ ತುಂಬಾ ದೊಡ್ಡದು.ನಮ್ಮ ನಾಯಕರ ಕೆಟ್ಟ ತೀರ್ಮಾನಗಳ ನೇರ ಪರಿಣಾಮ ಆದದ್ದು ಇದೇ ಬ್ರಿಗೇಡ್ ನ ಮೇಲೆ.ಈ ಬ್ರಿಗೇಡ್ ನ ಅಂದಿನ ಬ್ರಿಗೇಡಿಯರ್ ದಿ||ಜಾನ್.ಪಿ.ದಳವಿ ೧೯೬೨ರಲ್ಲಿ ಅವರ ಬ್ರಿಗೇಡ್ ನ ಮೇಲೆ ಆದ ಎಲ್ಲ ದಾಳಿಗಳನ್ನು ಅವರ ಪುಸ್ತಕ "ದಿ ಹಿಮಾಲಯನ್ ಬ್ಲಂಡರ್" ನಲ್ಲಿ ಸಮಗ್ರವಾಗಿ ವಿವರಿಸುತ್ತಾರೆ.ಅವರನ್ನು ಸೇರಿದಂತೆ ಅವರ ಬ್ರಿಗೇಡ್ ನ ಅನೇಕ ಅಧಿಕಾರಿಗಳು ಚೀನಾದ ಯುದ್ದ ಕೈದಿಗಳಾಗಿದ್ದರು.ಅವರು ಹೇಳುವಂತೆ ಅವರ  ಬ್ರಿಗೇಡ್ ಗೆ ವಹಿಸಿದ ಕೆಲಸ ನಮ್ಕಾಚು ನದಿಗೆ ಅಡ್ಡಲಾಗಿ ಕಟ್ಟಿದ್ದ ೫ ಸೇತುವೆ ಗಳನ್ನು ಕಾಯುವುದು(ಅಸಲಿಗೆ ಅವ್ಯಾವು ಸೇತುವೆಗಳೇ ಅಲ್ಲ ಎಂದು ಆತ ಹೇಳುತ್ತಾರೆ). ಅದಕ್ಕೆ ನಿಯೋಜನೆಗೊಂಡಿದ್ದ ಸೈನಿಕರು ೫೪೩.ಅದರಲ್ಲಿ ಯುದ್ಧದಿಂದ ಹುತಾತ್ಮರಾದವರು ೨೮೨ ಸೈನಿಕರು.೮೧ ಸೈನಿಕರು ಗಾಯಗೊಂಡು ಬಂಧಿತರಾದರೆ,ಗಾಯಗೊಳ್ಳದೇ ೯೦ ಸೈನಿಕರು ಬಂಧಿತರಾದರು.ಯಾವುದೇ ಅಪಾಯವಿಲ್ಲದೆ ಮನೆಗೆ ಸೇರಿದವರು ೬೦ ಸೈನಿಕರು ಮಾತ್ರ.ಇದಕ್ಕಿಂತ ಪ್ರಾಮಾಣಿಕವಾಗಿ ಒಂದು ತುಕಡಿ ಯುದ್ಧಮಾಡಲು ಸಾಧ್ಯವೇ? ಅದೂ ನೆಹರು ಸರ್ಕಾರ ಒದಗಿಸಿದ ಸವಲತ್ತುಗಳನ್ನು ಇಟ್ಟುಕೊಂಡು?ತವಾಂಗ್ ಚೀನಾದ ವಶವಾಗುವುದರೊಂದಿಗೆ ಚೀನಾ ತನ್ನದೆಂದು ವಾದಿಸಿದ ನೆಲ ಅದರದ್ದಾಗಿತ್ತು.ಆದರೂ ಮುಂದುವರೆದ ಚೀನಾ ಬ್ರಹ್ಮಪುತ್ರಕೊಳ್ಳದವರೆಗೂ ಬಂದುಬಿಟ್ಟಿತು.ಅಂತಿಮವಾಗಿ ಅಮೆರಿಕಾದ ಮಧ್ಯಪ್ರವೇಶದೊಂದಿಗೆ ಯುದ್ಧ ಅಂತ್ಯವಾಗಿ ಚೀನಾ ನಮ್ಮನೆಲ ಬಿಟ್ಟು ಹೊರಟುಹೋಯಿತು (ಚೀನಾ ತನ್ನದಲ್ಲ ಎಂದು ಭಾವಿಸಿದ್ದ ನೆಲವನ್ನು ಮಾತ್ರ).
ಕೊನೆಗೆ:
ಭೌಗೋಳಿಕವಾಗಿ ನೋಡಿದರೆ ಟಿಬೆಟ್ ವಶಪಡಿಸಿಕೊಂಡಿದ್ದ ಚೀನಾ ಈ ಯುದ್ಧದಲ್ಲಿ ಸಹಜವಾಗಿ ಮೇಲುಗೈ ಹೊಂದಿತ್ತು.ಟಿಬೆಟ್ನಲ್ಲಿ ಚೀನಿ ಸೈನಿಕ ಬೆಚ್ಚಗೆ ಬಂಕರ್ ನಲ್ಲಿ ಕುಳಿತು ಸಮಯ ನೋಡಿ ಸರಸರನೆ ತನ್ನ ಶಸ್ತ್ರಾಸ್ತ್ರದೊಂದಿಗೆ ಇಳಿದು ಬಂದು ನಮ್ಮ ಸೈನಿಕನೊಂದಿಗೆ ಯುದ್ಧಕ್ಕೆ ಇಳಿಯುತ್ತಾನೆ.ಆದರೆ ಭಾರತದ ಯೋಧರಿಗೆ ಅಂತಹ ಯಾವುದೇ ತಲೆ ಮರೆಸಿಕೊಳ್ಳುವ ಸ್ಥಳಗಳಿಲ್ಲ.ಅಲ್ಲದೇ ಭಾರತ ಕಡೆಯಿಂದ ಕದನ ನಡೆದ ಜಾಗಗಳಿಗೆ ಅಗತ್ಯ ಸಲಕರಣೆಗಳನ್ನ ಸಾಗಿಸುವುದು ಬಲುಕಷ್ಟ.ಹಾಗಾಗಿ ಹೆಚ್ಚಿನ ಸೈನ್ಯ  ನಿಯೋಜಿಸುವುದು ಭಾರತಕ್ಕೆ ಸಾಧ್ಯವಾಗಿರಲಿಲ್ಲ.ಈ ಒಂದು ವ್ಯತ್ಯಾಸವೇ ಭಾರತವನ್ನ ಅರ್ಧ ಸೋಲಿಸಿತ್ತು.ಇನ್ನುಮುಂದೆ ಎಂದೇ ಯುದ್ಧ ನಡೆದರೂ ಈ ಒಂದು ಮುನ್ನಡೆಯನ್ನ ಚೀನಿ ದುಶ್ಮನ್ ಹೊಂದಿರುತ್ತಾನೆ.ಒಟ್ಟಾರೆ ಹೇಳುವುದಾದರೆ ಟಿಬೆಟ್ ನಲ್ಲಿ ಚೀನಾ ತಳವೂರುವುದನ್ನು ಭಾರತ ವಿರೋಧಿಸದೆ ಇದ್ದದ್ದು ಭಾರಿ ಅನಾಹುತಗಳಿಗೆ ಎಡೆಮಾಡಿಕೊಟ್ಟಿತ್ತು.ಅಲ್ಲದೇ ಭಾರತದ ನಾಯಕರು ಶತಮಾನಗಳಿಂದ ಅನುಸರಿಸಿರುವ ಅಸಡ್ಡೆ ಮನೋಭಾವ ನಮ್ಮನ್ನು ಇತರರಿಗಿಂತ ಹಿಂದೆ ಬೀಳುವಂತೆ ಮಾಡಿದೆ.ದೂರದೃಷ್ಟಿ ನಾಯಕರಿಗೆ ಇರಲೇಬೇಕಾದ ಗುಣ.ಆದರೆ ನಮ್ಮನ್ನಾಳಿದ ಅನೇಕ ನಾಯಕರಿಗೆ ಈ ಗುಣ  ಇರಲೇ ಇಲ್ಲ. ಶತಮಾನಗಳಿಂದ ಅನ್ಯರ ಆಡಳಿತದಲ್ಲಿದ್ದ ನಾವು ಸ್ವತಂತ್ರ ಬಂದ ಕೂಡಲೇ ಮತ್ತೆ ಇತರರು ನಮ್ಮ ಮೇಲೆ ಕಣ್ಣು ಹಾಯಿಸದಂತೆ ಬಲಿಷ್ಠ ಸೇನೆ ಕಟ್ಟಬೇಕು ಎಂದು ಅನ್ನಿಸಲೇ ಇಲ್ಲ.ಶಾಂತಿ ಮಂತ್ರ ಎಂಬುದು ಬಳಸಬಾರದ ಕಡೆಯಲ್ಲೆಲ್ಲಾ ಬಳಕೆಯಾಗಿತ್ತು.ಅದರಲ್ಲೂ ನೆಹರು ಸರ್ಕಾರ ತನ್ನ ರಾಜಕೀಯ ನೀತಿಗಳನ್ನ ಸೇನೆಯ ಮೇಲೂ ಹೇರಿದ್ದರು.ಅಂತಿಮವಾಗಿ ಹೇಳುವುದಾದರೆ  ನಮ್ಮ ಪ್ರಜೆಗಳು ಸಹ  ಈ ವಿಚಾರದಲ್ಲಿ ಹೊಣೆಗಾರರಾಗುತ್ತಾರೆ. ಏಕೆಂದರೆ ಸೇನೆ ಎದುರಿಸುತ್ತಿದ್ದ ಸಮಸ್ಯೆಗಳ ಕುರಿತು ಯಾರು ಪ್ರತಿಭಟಿಸಲಿಲ್ಲ.ಹಾಗೊಂದು ವೇಳೆ ಪ್ರತಿಭಟಿಸಿದ್ದರೆ,ಒಂದಷ್ಟು ಸೌಕರ್ಯ ಸೇನೆಗೆ ಲಭಿಸಿರುತಿತ್ತು .ಒಟ್ಟಾರೆಯಾಗಿ ೧೯೬೨ರ ಯುದ್ಧ ನಮಗೊಂದು ದೊಡ್ಡ  ಪಾಠ ಕಲಿಸುತ್ತದೆ, ನಾವು ಕಲಿಯುವುದಿದ್ದರೆ!
                            ಇಂಡೋ-ಚೀನಾ ಯುದ್ಧದ ವೀರ ಯೋಧರಿಗೊಂದು ಶ್ರದ್ಧಾಂಜಲಿ ಹೇಳುತ್ತಾ ಈ ಒಂದು ಲೇಖನವನ್ನು  ಅಂತ್ಯಗೊಳಿಸುತ್ತೇನೆ.

 ಅಭಿನಂದನೆ: "ದಿ ಹಿಮಾಲಯನ್ ಬ್ಲಂಡರ್" ಕೃತಿಯನ್ನು ತಮ್ಮ ಸೊಗಸಾದ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಟ್ಟಿರುವ ರವಿ ಬೆಳಗೆರೆ ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಹೆಚ್ಚಿನ ಓದಿಗೆ: 
"ದಿ ಹಿಮಾಲಯನ್ ಬ್ಲಂಡರ್" ಮೂಲ ಬ್ರಿಗೇಡಿಯರ್ ಜಾನ್.ಪಿ.ದಳವಿ ಕನ್ನಡಕ್ಕೆ ಅನುವಾದ ರವಿ ಬೆಳಗೆರೆ.
click here to study more
ಬ್ರಿಗೇಡಿಯರ್ ಜಾನ್.ಪಿ.ದಳವಿ